ನಾಲ್ವರ ಬಾಳಿಗೆ ಬೆಳಕು ನೀಡಿದ ಅಪ್ಪು ಕಣ್ಣುಗಳು..!

106
firstsuddi

ಬೆಂಗಳೂರು : ಪುನೀತ್ ರಾಜ್‍ಕುಮಾರ್ ಅವರು ಸಾವಿನ ನಂತರವೂ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಅವರ ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ.

ಈ ಕುರಿತಂತೆ ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತಾನಾಡಿದರು. ಈ ಹಿಂದೆ ಡಾ. ರಾಜ್‍ಕುಮಾರ್ ಅವರು ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಹಾದಿಯಲ್ಲಿಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ. ನಾಲ್ಕು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಸಾಮಾನ್ಯವಾಗಿ ಕಣ್ಣುದಾನ ಮಾಡಿದರೆ ಇಬ್ಬರಿಗೆ ಕೊಡುತ್ತೇವೆ. ಆದರೆ ಅಪ್ಪು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಿದ್ದೇವೆ. ದಾನ ಮಾಡಲಾದ 2 ಕಣ್ಣುಗಳು ತುಂಬಾ ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು ನಾವು ನಾಲ್ಕು ಭಾಗ ಮಾಡಬಹುದು. ಕಾರ್ನಿಯಾವನ್ನು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಾರ್ನಿಯಾ ತೊಂದರೆ ಇರುವವರಿಗೆ ಕಣ್ಣಿನ ಮುಂಭಾಗವನ್ನು ಅಳವಡಿಸುತ್ತೇವೆ. ಹಿಂಭಾಗದ ತೊಂದರೆ ಇರುವವರಿಗೆ ಹಿಂಭಾಗದ ಕಾರ್ನಿಯಾವನ್ನು ಅಳವಡಿಸುತ್ತೇವೆ ಎಂದು ಡಾ. ಭುಜಂಗ ಶೆಟ್ಟಿ ಹೇಳಿದ್ದಾರೆ.

ಶನಿವಾರವೇ ಅಪರೇಷನ್ ಮಾಡಿ ಪುನೀತ್ ಅವರ ಕಣ್ಣನ್ನು ಬೇರೆಯವರಿಗೆ ನೀಡಿದ್ದೇವೆ. ನಾಲ್ವರು ಇದೀಗ ತುಂಬಾ ಚೆನ್ನಾಗಿದ್ದಾರೆ. ಪುನೀತ್ ಕಣ್ಣು ತುಂಬಾ ಚೆನ್ನಾಗಿದ್ದ ಕಾರಣ ಇದನ್ನು ನಾಲ್ವರಿಗೆ ನೀಡಲು ಸಾಧ್ಯವಾಯಿತು. ಒಬ್ಬ ಯುವತಿ, ಮೂವರು ಯುವಕರಿಗೆ ಅಪ್ಪು ಕಣ್ಣು ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಏಕಕಾಲಕ್ಕೆ ಒಬ್ಬರ ಕಣ್ಣನ್ನು ನಾಲ್ಕು ಮಂದಿಗೆ ಒಂದೇ ದಿನದಲ್ಲಿ ಜೋಡಿಸಿದ್ದು ಇದೇ ಮೊದಲು. ಇದನ್ನು ಸಾಧ್ಯವಾಗಿಸಿದ ನಮ್ಮ ವೈದ್ಯರ ತಂಡಕ್ಕೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.