ನಾಳೆಯಿಂದ 18ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗುತ್ತಿಲ್ಲ, ಆಸ್ಪತ್ರೆ ಬಳಿ ಯಾರೂ ಬರ್ಬೇಡಿ : ಸುಧಾಕರ್ ಮನವಿ…

306
firstsuddi

ಬೆಂಗಳೂರು : ನಾಳೆ(ಮೇ 1)ಯಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆ ಬಳಿ ಯಾರೂ ಬರಬಾರದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಆರಂಭವಾಗಬೇಕಿದ್ದ ಲಸಿಕೆ ಆರಂಭವಾಗಲ್ಲ. ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನು ಅಧಿಕೃತವಾಗಿ ತಿಳಿಸುತ್ತೇವೆ. ಕಂಪೆನಿಗಳು ಯಾವಾಗ ಕೊಡುತ್ತೆ ಅಂತ ಇದುವರೆಗೆ ನಮಗೆ ಮಾಹಿತಿ ಬಂದಿಲ್ಲ. ಕಂಪೆನಿಯವರು ಅಧಿಕೃತ ಮಾಹಿತಿ ಹಂಚಿಕೊಂಡ ನಂತರ ಲಸಿಕೆ ಯಾವ ವಾರದಿಂದ ಸಿಗುತ್ತೆ ಅಂತ ಹೇಳಬಹುದು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಅದರ ಅನ್ವಯ 3 – 3.5 ಕೋಟಿ ಜನ ಕರ್ನಾಟಕದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. 1 ಕೋಟಿ ಕೋವಿಶೀಲ್ಡ್ ಗೆ 400 ಕೋಟಿ ಕೊಟ್ಟು ಆರ್ಡರ್ ಮಾಡಿದ್ದೇವೆ. 28ನೇ ತಾರಿಕಿನಿಂದ ನೊಂದಣಿ ಆರಂಭವಾಗಿದೆ, ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದರು.

18 ವರ್ಷದಿಂದ 44 ವರ್ಷದೊಳಗಿನವರಿಗೆ ರಾಜ್ಯದ ಜನತೆಗೆ ಸರ್ಕಾರ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದು ಖಂಡಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು, ಅದೇ ರೀತಿ 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳದವರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ. ಸದ್ಯದ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರು ಕೋವಿಡ್ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಚಿವರು ಮನವಿ ಮಾಡಿಕೊಂಡರು.