ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ಖ್ಯಾತ ನಟಿ ಅಪರ್ಣಾ ನಾಯರ್ ಅವರು ನಿಧನರಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅಪರ್ಣಾ ನಾಯರ್ ಅವರ ಶವ ಪತ್ತೆಯಾಗಿದೆ.
ನಿನ್ನೆ ಸಂಜೆ 7.30ರ ಸುಮಾರಿಗೆ ಅಪರ್ಣಾ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ. ಈ ವೇಳೆ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರಿ ಇದ್ದರು ಎಂದು ಹೇಳಲಾಗಿದೆ. ಕೂಡಲೇ ಅಪರ್ಣಾ ನಾಯರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪರ್ಣಾ ನಾಯರ್ ಅವರು ಪತಿ, ಇಬ್ಬರು ಮಕ್ಕಳು, ತಾಯಿ ಮತ್ತು ಸಹೋದರಿಯೊಂದಿಗೆ ತಿರುವನಂತಪುರಂ ನಿವಾಸದಲ್ಲಿ ವಾಸವಾಗಿದ್ದರು. ಅಪರ್ಣಾ ಅವರು ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
‘ಮೇಘತೀರ್ಥಂ’, ‘ಮುದುಗೌ’, ‘ಅಚಾಯನ್ಸ್’, ‘ಕಲ್ಕಿ’, ‘ಕೊಡತಿ ಸಮಕ್ಷಂ ಬಾಲನ್ ವಕೀಲ್’ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಅಪರ್ಣಾ ನಾಯರ್ ಅವರು ನಟಿಸಿದ್ದಾರೆ. ಹಲವು ಟಿವಿ ಸೀರಿಯಲ್ಗಳಲ್ಲೂ ಅವರು ಅಭಿನಯಿಸಿದ್ದಾರೆ. ಆ ಮೂಲಕ ಮಲಯಾಳಂ ಸಿನಿಮಾ ಪ್ರೇಕ್ಷಕರಿಗೆ ಅವರು ಪರಿಚಿತರಾಗಿದ್ದರು.
ಅಪರ್ಣಾ ನಾಯರ್ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪರ್ಣಾ ನಾಯರ್ ಸಾವಿಗೆ ಕಾರಣ ಏನು ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ.
ನಟಿಯ ಅಗಲಿಕೆಗೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.










