ಬೆಂಗಳೂರು : ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಶಿಕ್ಷಣದಲ್ಲಿ ಮಾರಲ್ ಸೈನ್ಸ್ ಸೇರಿಸಬೇಕೆಂಬ ಬೇಡಿಕೆ ಇದೆ. ಗುಜರಾತ್ ನಲ್ಲಿ ಭಗವದ್ಗೀತೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ. ಮಕ್ಕಳಿಗೆ ಮಾರಲ್ ಸೈನ್ಸ್ ವಿಷಯಗಳು ಇವತ್ತು ಬೋಧನೆ ಆಗುತ್ತಿಲ್ಲ. ಹೀಗಾಗಿ ಭಗವದ್ಗೀತೆ ಅಂಶಗಳನ್ನು ತಿಳಿಸುವುದು ಬಹಳ ಮುಖ್ಯ. ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಗ್ಗೆ ಸಿಎಂ, ಶಿಕ್ಷಣ ತಜ್ಞರು, ಸಲಹಾ ಸಮಿತಿಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ. ಈ ವರ್ಷ ತರುವುದಿಲ್ಲ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಅದರಂತೆ ಹೈಕೋರ್ಟ್ ತೀರ್ಪಿನ ಅನುಸಾರ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ತರಗತಿಯಲ್ಲಿ ಇನ್ನು ಹಿಜಾಬ್ ಧರಿಸಲು ಅವಕಾಶ ಇಲ್ಲ. ಹೈಕೋರ್ಟ್ ತೀರ್ಪು ನೀಡಿದೆ ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ್ತೆ ಅವಕಾಶ ಸಡಿಲಿಕೆ ಇರುವುದಿಲ್ಲ. ಇನ್ನು ಮುಂದೆ ಪರೀಕ್ಷೆಯ ವಿಚಾರದಲ್ಲಿ ವಿಶೇಷ ಅವಕಾಶವನ್ನು ನೀಡಲ್ಲ. ಇಷ್ಟು ದಿನ ಕೋರ್ಟ್ ತೀರ್ಪು ಬಂದಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಕೊಂಚ ಸಡಿಲಿಕೆ ನೀಡಿತ್ತು. ಇನ್ನುಮುಂದೆ ಮತ್ತೆ ಯಾವುದೇ ಕಾರಣಕ್ಕೂ ಹಿಜಾಬ್ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.










