ಹೈದರಾಬಾದ್ : ಪತಿಯನ್ನು ಪತ್ನಿಯೇ ಕೊಂದು, ಆತನ ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಶರಣಾಗಿರುವ ಘಟನೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ರೇಣಿಗುಂಟದಲ್ಲಿ ನಡೆದಿದೆ.
ರವಿಚಂದ್ರನ್ (53) ಮೃತನಾಗಿದ್ದಾನೆ. ವಸುಂಧರಾ ಪತಿಯನ್ನು ಕೊಂದ ಆರೋಪಿ ಪತ್ನಿಯಾಗಿದ್ದಾಳೆ. ರವಿಚಂದ್ರನ್ ಮತ್ತು ವಸುಂಧರಾ ದಂಪತಿಗಳಿಗೆ 20 ವರ್ಷದ ಮಗನಿದ್ದಾನೆ. ನಿನ್ನೆ ಬೆಳಗ್ಗೆ ದಂಪತಿ ನಡುವೆ ಸಣ್ಣಪುಟ್ಟ ಜಗಳ ನಡೆದಿದೆ. ಈ ಹಿನ್ನೆಲೆ ಕೋಪಗೊಂಡ ವಸುಂಧರಾ, ಚಾಕುವಿನಿಂದ ತನ್ನ ಪತಿ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾಳೆ, ಬಳಿಕ ತಲೆ ಕತ್ತರಿಸಿದ್ದಾರೆ.
ಬಳಿಕ ತಲೆಯನ್ನು ಬ್ಯಾಗ್ ನಲ್ಲಿಟ್ಟುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಅಲ್ಲಿಗೆ ಕರೆತಂದು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗಾಗಿ ಎಸ್ವಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ರೇಣಿಗುಂಟ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.










