ಕೊಪ್ಪಳ : ಕೌಟುಂಭಿಕ ಕಲಹ ಹಿನ್ನೆಲೆ, ತಾಯಿಯೊಬ್ಬರು ತನ್ನ ಒಂದೂವರೆ ವರ್ಷದ ಮಗುವನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ. ಕವಿತಾ ಮಗುವನ್ನು ಕೊಂದ ತಾಯಿ ಎನ್ನಲಾಗಿದ್ದು, ಪತಿ ದುಡಿಯದೇ ತನ್ನನ್ನು ಹಾಗೂ ತನ್ನ ಮಗುವನ್ನು ಸಾಕುತಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಪತಿ ಮನೆಯಲ್ಲಿ ಇಲ್ಲದ ವೇಳೆ ತನ್ನ ಒಂದೂವರೆ ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಕುರಿತು ಪತಿ ಶಶಿಧರ್ ಅವರು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ದೂರನ್ನು ದಾಖಲಿಸಿದ್ದು, ನಾನು 5-6 ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದುದರಿಂದ ನನ್ನ ಪತ್ನಿ ಯಾವಾಗಲೂ ನೀವು ದುಡಿಯಲು ಹೋಗದಿದ್ದರೆ ನನ್ನನ್ನು ಹಾಗೂ ಮಗುವನ್ನು ಹೇಗೆ ಸಾಕುತ್ತೀರಾ? ನೀವು ದುಡಿಯದೇ ಇದ್ದರೆ ಮಗುವನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಕಾರಟಗಿ ಪೊಲೀಸರು ಕವಿತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.










