ಸೀಟ್ ಬೆಲ್ಟ್ ಹಾಕದ ನಳಿನ್ ಅಭಿನಂದನಾ ಸಮಾರಂಭದ ಜೀಪ್ ಚಾಲಕ – ದಂಡ ಹಾಕದ ಪೊಲೀಸರು!

249
firstsuddi

ಉಡುಪಿ: ಭಾರತ ಸರಕಾರವು ಮೋಟಾರು ವಾಹನ ಕಾಯಿದೆ 1968ಕ್ಕೆ ತಿದ್ದುಪಡಿಯನ್ನು ಮಾಡಿ ಸಂಚಾರ ನಿಯಮಗಳ ಉಲ್ಲಂಘನೆಗೆ ಹಾಲಿ ಇದ್ದ ದರಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದು, ಹೊಸ ದರಗಳು ತಕ್ಷಣದಿಂದಲೇ ಜಾರಿಯಾಗಿದ್ದರೂ ಕೂಡ ಉಡುಪಿ ಜಿಲ್ಲೆಯಲ್ಲಿ ಜನಸಾಮಾನ್ಯರಿಗೊಂದು ನ್ಯಾಯ, ರಾಜಕೀಯ ನಾಯಕರಿಗೊಂದು ನ್ಯಾಯ ಎನ್ನುವುದು ಸಾಬೀತಾಗಿದೆ.

ಉಡುಪಿಯಲ್ಲಿ ಇಂದು ರಾಜ್ಯದ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿಲ್ಲಾ ಬಿಜೆಪಿ ಅದ್ದೂರಿ ಸಮಾರಂಭ ನಡೆದಿದ್ದು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರಕಾರ ಜಾರಿಗೆ ತಂದ ಕಾನೂನನ್ನೇ ಪಾಲಿಸದಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ವಾಹನದಲ್ಲಿ ಸೀಟ್ ಬೆಲ್ಟ್ ಹಾಕದೆಯೇ ಪ್ರಯಾಣ ಮಾಡಿದ್ದು ಇಬ್ಬರಿಗೂ ಕೂಡ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಯಾವುದೇ ದಂಡ ಹಾಕದಿರುವುದನ್ನು ಜನಸಾಮಾನ್ಯರಿಗೊಂದು ನ್ಯಾಯ, ರಾಜಕೀಯ ನಾಯಕರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.

ಉಡುಪಿ ಜೋಡುಕಟ್ಟೆಯಿಂದ ರಾಜ್ಯಾಧ್ಯಕ್ಷರನ್ನು ತೆರೆದ ಜೀಪಿನಲ್ಲಿ ನಗರದ ಕಿದಿಯೂರು ಸಭಾಂಗಣದ ವರೆಗೆ ಕರೆ ತರಲಾಗಿತ್ತು ಈ ವೇಳೆ ಜೀಪಿನ ಚಾಲಕ ಕೂಡ ಸೀಟ್ ಬೆಲ್ಟ್ ಹಾಕದೆ ಕಾನೂನಿನ ಉಲ್ಲಂಘನೆ ನಡೆದಿದೆ. ಬಿಜೆಪಿ ಸರಕಾರವೇ ಜಾರಿಗೆ ತಂದ ಕಾನೂನನ್ನು ಗಾಳಿಗೆ ತೂರಿದ ಬಿಜೆಪಿ ನಾಯಕರ ವರ್ತನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.