ಪುಷ್ಪಾ ಪ್ರೀಮಿಯರ್ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಟ್ಟ ಅಲ್ಲು ಅರ್ಜುನ.

36

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಪುಷ್ಪಾ-2 ದ ರೂಲ್ ಪ್ರೀಮಿಯರ್ ಶೋ ವೇಳೆ ದುರಂತ ಸಂಭವಿಸಿತ್ತು. ಜನಸಂದಣಿಯಿಂದಾಗಿ ಮಹಿಳಾ ಅಭಿಮಾನಿ ರೇವತಿ (35) ಕಾಲ್ತುಳಿತದಲ್ಲಿ ಸಾವನ್ನಪ್ಪಿದರೆ, ಅವರ 13 ವರ್ಷ ವಯಸ್ಸಿನ ಮಗ ಶ್ರೀ ತೇಜ್ ತೀವ್ರವಾಗಿ ಗಾಯಗೊಂಡಿದ್ದಾನೆ. ಆ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ನಾಯಕ ಅಲ್ಲು ಅರ್ಜುನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಮಹಿಳೆಯ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಪುಷ್ಪಾ ಹೀರೋ ಘೋಷಿಸಿದ್ದಾರೆ. ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದಿರುವ ನಟ ಅಲ್ಲು ಅರ್ಜುನ್, ಸಂಭವಿಸಿರುವ ದುರ್ಘಟನೆ ಅತ್ಯಂತ ಹೃದಯವಿದ್ರಾವಕವಾದದ್ದು. ಘಟನೆ/ಸಂದಿಗ್ಧ ಪರಿಸ್ಥಿತಿಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ. ಈ ನೋವಿನಲ್ಲಿ ಆ ಸಂತ್ರಸ್ತ ಕುಟುಂಬ ಏಕಾಂಗಿಯಲ್ಲ. ಅವರೊಂದಿಗೆ ನಾನಿದ್ದೇನೆ. ವೈಯಕ್ತಿಕವಾಗಿ ಆ ಕುಟುಂಬವನ್ನು ಭೇಟಿ ಮಾಡುತ್ತೇನೆ. ಈ ಸವಾಲಿನ ಸಂದರ್ಭದಲ್ಲಿ ಅವರಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತೇನೆ ಎಂದು ಬರೆದಿದ್ದಾರೆ. ಡಿಸೆಂಬರ್ 4 ರಂದು ಹೈದರಾಬಾದ್‍ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತನ್ನ ಮಗನೊಂದಿಗೆ ಆಗಮಿಸಿದ್ದ ಮಹಿಳೆ ಸಾವನ್ನಪ್ಪಿದ್ದಳು. ಅವರ ಮಗ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.