ಪೊಲೀಸರಿಂದ ತಪ್ಪಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದು ಆರೋಪಿ ಸಾವು…

67
firstsuddi

ಬೆಂಗಳೂರು: ಪ್ರಕರಣವೊಂದರಲ್ಲಿ ಬಂಧಿಸಲು ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ 4ನೇ ಮಹಡಿಯಿಂದ ಜಿಗಿದು ಆರೋಪಿ ಮೃತಪಟ್ಟಿರುವ ಘಟನೆ ನಗರದ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೊಹಮ್ಮದ್ ಹುಸೇನ್ (31) ಮೃತ ಯುವಕ ಎಂದು ಗುರುತಿಸಲಾಗಿದೆ. ಸ್ಥಳೀಯ ಯುವತಿಗೆ ಬೆದರಿಕೆ ಹಾಕಿದ ಆರೋಪದಡಿ ಮೊಹಮ್ಮದ್ ಹುಸೇನ್ ವಿರುದ್ಧ ಆಕೆಯ ಪೋಷಕರು ದೂರು ನೀಡಿದ್ದರು. ಅಪರಾಧ ಪ್ರಕರಣದ ವಿಚಾರಣೆ ಸಲುವಾಗಿ ನಿನ್ನೆ ಬೊಮ್ಮನಹಳ್ಳಿಯ ಬೇಗೂರು ರಸ್ತೆಯಲ್ಲಿರುವ ಮನೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು. ಪೊಲೀಸರನ್ನು ಕಂಡ ಮೊಹಮ್ಮದ್ ಹುಸೇನ್, ಮನೆಯ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರೇ ತಳ್ಳಿ ಕೊಂದಿದ್ದಾರೆಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನಲೆ ಸಂಕ್ಷಿಪ್ತವಾದ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.