ಬೆಂಗಳೂರು : ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು. ಕರ್ನಾಟಕದಲ್ಲಿ ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಪೊಲೀಸ್ ಇಲಾಖೆಯು ತೃತೀಯ ಲಿಂಗಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿದೆ.
ಮಂಗಳಮುಖಿಯರಿಗಾಗಿ ರಾಜ್ಯ ಪೊಲೀಸ್ ಇಲಾಖೆ 5 ಹುದ್ದೆಗಳನ್ನು ಮೀಸಲಿರಿಸಿದೆ. ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ (ಕೆಎಸ್‌ಆರ್‌ಪಿ ಮತ್ತು ಐಆರ್ಬಿ) ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅವರು ಅರ್ಜಿ ಸಲ್ಲಿಸಬಹುದಾಗಿದೆ.
ತೃತೀಯಲಿಂಗಿ ಸಮುದಾಯದಿಂದ ಅರ್ಜಿಗಳನ್ನು ಆಹ್ವಾನಿಸಿದ ಕೆಎಸ್ ಪಿಯ ನಿರ್ಧಾರವನ್ನು ಸಂಗಮ ಸಂಘ ಸ್ವಾಗತಿಸಿದೆ ಮತ್ತು ಒಂದು ಸಂಘಟನೆಯಾಗಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನಾವು ರಾಜ್ಯ ಪೊಲೀಸರಿಗೆ ಧನ್ಯವಾದ ಹೇಳುತ್ತೇವೆ ಎಂದು ತಿಳಿಸಿದೆ.
ಕಳೆದ ವರ್ಷ ನಗರದ ಎನ್‌ಜಿಒ ಮತ್ತು ಹಕ್ಕುಗಳ ಸಂಘ – ಸಂಗಮ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿಶಾ ಗೂಳೂರ್ ಪರ ಹಿರಿಯ ವಕೀಲ ಬಿಟಿ ವೆಂಕಟೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ್ದ ಹೈಕೋರ್ಟ್, “ಜುಲೈ 2021 ರಲ್ಲಿ ಎಲ್ಲಾ ವರ್ಗಗಳ ನೇಮಕಾತಿಯಲ್ಲಿ ಟ್ರಾನ್ಸ್ ಜೆಂಡರ್ ಗಳಿಗೆ ಶೇಕಡಾ ಒಂದರಷ್ಟು ಸಮತಲ ಮೀಸಲಾತಿ ನೀಡಬೇಕು ಎಂದು ಆದೇಶಿಸಿತ್ತು.










