ಪೋಷಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ನಾವಿದ್ದೇವೆ : ಶಶಿಕಲಾ ಜೊಲ್ಲೆ ಭರವಸೆ…

99
firstsuddi

ಬೆಂಗಳೂರು : ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ನಾವಿದ್ದೇವೆ. ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ 19 ಮಕ್ಕಳ ಜೊತೆಗೆ ಗೂಗಲ್ ಮೀಟ್ ಮೂಲಕ ವೀಡಿಯೊ ಸಂವಾದ ನಡೆಸಿದ ಸಚಿವರು ಸುಮಾರು ಮೂರು ಗಂಟೆಗಳ ಕಾಲ ಪ್ರತಿಯೊಬ್ಬ ಮಗುವಿನ ಜೊತೆಗೂ ವೈಯಕ್ತಿಕವಾಗಿ ಚರ್ಚೆ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ, ಕಷ್ಟದ ಸಂದರ್ಭದಲ್ಲಿ ಧೃತಿಗೆಡದೆ ಜೀವನದ ಸವಾಲುಗಳನ್ನು ಎದುರಿಸಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೆಳೆಯುವಂತೆ ಮಕ್ಕಳಿಗೆ ಸಚಿವರು ಕಿವಿ ಮಾತು ಹೇಳಿದರು.

ಈ ಕುರಿತು ಮಾತನಾಡಿರುವ ಸಚಿವರು ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ನೋವು ಕಂಡು ಮನಸ್ಸು ಭಾರವಾಯಿತು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ಪೋಷಕರು ಇಲ್ಲ ಎಂಬ ಕೊರಗು ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಬಾಲ ಸೇವಾ ಯೋಜನೆಯನ್ನು ಘೋಷಿಸಿದ್ದಾರೆ. ಸರ್ಕಾರದಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ನೀಡುತ್ತೇವೆ . ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬಾಲ ಸೇವಾ ಯೋಜನೆಯ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿಯೂ ಎಲ್ಲರಿಗೂ ಮಾಹಿತಿ ತಲುಪುವಂತೆ ಮಾಡಲು ಎಲ್ಲ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಘೋಷಣೆ ಮಾಡಿರುವ ಮಾಸಿಕ 3,500 ರೂ. ನೀಡುವುದು. 10 ವರ್ಷದ ಒಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ 21 ವರ್ಷ ಪೂರೈಸಿರುವ ತಂದೆ ತಾಯಿಗಳನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಸಹಾಯಧನವನ್ನು ನೇರವಾಗಿ ಅವರ ಅಕೌಂಟ್ಗೆ ತಲುಪಿಸಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಂದು ಸಚಿವರು ತಿಳಿಸಿದ್ದಾರೆ.