ಪ್ರಜಾಪ್ರಭುತ್ವಕ್ಕೆ ಮೌಲ್ಯ ದೊರೆತು ಮತದಾರರಿಗೆ ಗೌರವ ಸಿಗಬೇಕಾದರೆ ಅನರ್ಹ ಶಾಸಕರನ್ನು ಮತದಾರರು ಉಪ ಚುನಾವಣೆಯಲ್ಲಿ ಸೋಲಿಸಬೇಕು : ಮೋಟಮ್ಮ.

263
firstsuddi

ಮೂಡಿಗೆರೆ: ಪ್ರಜಾಪ್ರಭುತ್ವಕ್ಕೆ ಮೌಲ್ಯ ದೊರೆತು ಮತದಾರರಿಗೆ ಗೌರವ ಸಿಗಬೇಕಾದರೆ ಅನರ್ಹ ಶಾಸಕರನ್ನು ಮತದಾರರು ಉಪ ಚುನಾವಣೆಯಲ್ಲಿ ಸೋಲಿಸಬೇಕು. ಕಾಂಗ್ರೆಸ್ ಶಾಸಕರನ್ನು ಸೆಳೆದು ಸರಕಾರ ರಚಿಸಿ ಬೊಕ್ಕಸಕ್ಕೆ ಕನ್ನ ಹಾಕಿ ಪದೇ ಪದೇ ಉಪ ಚುನಾವಣೆಗೆ ಮುಂದಾಗುವ ಬಿಜೆಪಿ ಸರಕಾರವನ್ನು ಜನ ಮನೆಗೆ ಕಳುಹಿಸಲಿದ್ದಾರೆಂದು ಮಾಜಿ ಸಚಿವೆ ಮೋಟಮ್ಮ ಭವಿಷ್ಯ ನುಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ಹುಚ್ಚಾಟದಿಂದ ಉಪ ಚುನಾವಣೆ ಬಂದಂತಾಗಿದೆ. ವಿಧಾನಸಭೆ ಸ್ಪೀಕರ್ ಮತ್ತು ಸುಪ್ರೀಂ ಕೋರ್ಟ್‍ನಿಂದಲೂ ಶಾಸಕರಾಗಲು ಅರ್ಹರಾಗಿಲ್ಲವೆಂದು ಹೇಳಿಸಿಕೊಂಡು ಬಿಜೆಪಿಯಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿರುವ ಅನರ್ಹರಿಗೆ ಮತದಾರರು ಮಾನ್ಯತೆ ನೀಡಿದರೆ ಮತದಾನಕ್ಕೆ ಪ್ರಜಾಪ್ರಭುತ್ವದಲ್ಲಿ ಬೆಲೆಯೇ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲವೆಂದು 3 ವರ್ಷದ ಬಳಿಕ ಬಿಜೆಪಿ ಸರಕಾರ ಶಾಲೆಗಳಿಗೆ ಸುತೋಲೆ ಹೊರಡಿಸಿದೆ. ಅಲ್ಲದೇ ಟಿಪ್ಪು ಸುಲ್ತಾನ್ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ ಜಯಂತಿಯನ್ನು ಕೈ ಬಿಟ್ಟಿದೆ. ಪಠ್ಯದಿಂದ ಟಿಪ್ಪು ಕುರಿತ ಪಾಠವನ್ನು ತೆಗೆದುಹಾಕಲು ಬಿಜೆಪಿ ಸರಕಾರ ಮುಂದಾಗಿದೆ. ಇದು ಬಿಜೆಪಿಗರಿಗೆ ಮತಿ ಭ್ರಮಣೆಯಾಗಿದೆ ಎಂದು ತೋರಿಸುತ್ತದೆ ಎಂದು ಖಾರವಾಗಿ ನುಡಿದರು.
ಜವಾಹರ್ ಲಾಲ್ ನೆಹರು ದೇಶದ ಪ್ರಧಾನಿಯಾಗಿದ್ದಾಗ ದೇಶದಲ್ಲಿ ವಾಯು, ಜಲ, ಭೂಸೇನೆಗಳನ್ನು ರಚಿಸಿದ್ದರು. ಜಗತ್ತಿನಲ್ಲಿ ಭಾರತೀಯ ಸೇನೆಗೆ ಉತ್ತಮ ಹೆಸರಿದೆ. ಬೇರೆ ದೇಶದ ಆಕ್ರಮಣಕ್ಕೆ ಉತ್ತರ ನೀಡುವ ಶಕ್ತಿಯನ್ನು ಸೇನೆಗೆ ಕಾಂಗ್ರೆಸ್ ನೀಡಿದೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಭಾರತೀಯ ಸೇನಗೆ ಶಕ್ತಿ ತುಂಬಿದ್ದರಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ದುರ್ಗಿ ಎಂದು ಕೊಂಡಾಡಿದ್ದರು. ಈಗ ಮೋದಿ ಪ್ರಧಾನಿಯಾದ ಬಳಿಕ ಸೇನೆಯ ಹೆಸರಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ನೀತಿ ಆಯೋಗದ ಹೆಸರೇಳಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ನೀತಿ ಆಯೋಗ ಯಾವ ಪುರುಷಾರ್ಥಕ್ಕಿದೆ ಎಂಬುದು ತಿಳಿಯುತ್ತಿಲ್ಲ. 6 ವರ್ಷದಲ್ಲಿ ದೇಶ ಭ್ರಷ್ಟಾಚಾರದ ಕೊಂಪೆಯಾಗಿದೆ. ಹಸಿವಿನಿಂದ ಜನ ಕಂಗಾಲಾಗಿದ್ದಾರೆ ಎಂದು ಹೇಳಿದರು.