ಬೆಂಗಳೂರು : ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿಯನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಅರಮನೆ ಮೈದಾನದಲ್ಲಿ ಇಂದು ನಡೆದ ನಾ ನಾಯಕಿ ಸಮಾವೇಶದಲ್ಲಿ ಗೃಹ ಲಕ್ಷ್ಮಿ ಯೋಜನೆ ಹೆಸರಿನಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುವ ಗ್ಯಾರಂಟಿ ಮಾದರಿ ಬೆಕ್ ಮಾದರಿಯನ್ನು ಬಿಡುಗಡೆ ಮಾಡಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಹ ಚೆಕ್ ಗೆ ಸಹಿ ಹಾಕಿದರು.
ರಾಜ್ಯ ಹಾಗೂ ದೇಶದಲ್ಲಿ ಮಹಿಳೆಯರ ಸಬಲಿಕರಣಕ್ಕೆ ನಿರಂತರವಾಗಿ ಅಗತ್ಯ ಯೋಜನೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಲು ತೀರ್ಮಾನಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರದಿಂದ ರಾಜ್ಯದ ಮಹಿಳೆಯರು ಏನನ್ನು ಬಯಸುತ್ತಾರೆ? ಎಂದು ರಾಜ್ಯದ ಮಹಿಳೆಯರಿಗೆ ತಮ್ಮ ಭಾವನೆ, ಸಮಸ್ಯೆ, ಸಲಹೆ, ಅಭಿಪ್ರಾಯ ಹಂಚಿಕೊಳ್ಳುವಂತೆ ಕರೆ ನೀಡಲಾಗಿತ್ತು.
ಈ ಕರೆಗೆ ಸ್ಪಂದಿಸಿ ಸಾಮಾಜಿಕ ಜಾಲತಾಣ, ಇಮೇಲ್, ವಾಟ್ಸಪ್ ಹಾಗೂ ಪಕ್ಷದ ಕಚೇರಿಗೆ ಪತ್ರದ ರೂಪದಲ್ಲಿ ಸಾವಿರಾರು ಸಲಹೆಗಳು ಸ್ವೀಕಾರವಾಗಿವೆ. ಇದರಲ್ಲಿ ಬಹುತೇಕ ಮಹಿಳೆಯರು ಬೆಲೆ ಏರಿಕೆ ಸಮಸ್ಯೆಗೆ ಕಾಂಗ್ರೆಸ್ ಪಕ್ಷದಿಂದ ಪರಿಹಾರ ನಿರೀಕ್ಷಿಸುತ್ತಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಲೆ ಏರಿಕೆ ಪರಿಣಾಮವಾಗಿ ಮನೆಯಲ್ಲಿ ದುಡಿಯುವವರ ವೇತನ ಸಾಲದೇ ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳೆಯರ ಸಂಕಷ್ಟಕ್ಕೆ ಪ್ರಮಾಣದ ನೆರವು ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ರೂ. 2,000ರಂತೆ ವರ್ಷಕ್ಕೆ ರೂ. 24 ಸಾವಿರ ಆರ್ಥಿಕ ನೆರವನ್ನು ಕಾಂಗ್ರೆಸ್ ಸರ್ಕಾರ ಒದಗಿಸಲಿದೆ. ಈ ಯೋಜನೆಯು ರಾಜ್ಯದ 1.5 ಕೋಟಿ ಗೃಹಣಿಯರಿಗೆ ನೆರವಾಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.










