ಬೆಂಗಳೂರು : ಪ್ರೀತಿಸಲು ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೊಬ್ಬ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ನಗರದ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ನಡೆದಿದೆ.
23 ವರ್ಷದ ಯುವತಿ ಮೇಲೆ ಪಾಗಲ್ ಪ್ರೇಮಿ ನಾಗೇಶ್ ಆ್ಯಸಿಡ್ ದಾಳಿ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಯುವತಿ ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾಗೇಶ್ ಈ ಯುವತಿಯ ಹಿಂದೆ ಬಿದ್ದು ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದನು. ಆದ್ರೆ ನಾಗೇಶ್ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ನಿನ್ನೆ ಸಂಜೆಯೂ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಇಂದು ಬೆಳಗ್ಗೆ ಯುವತಿ ಕೆಲಸಕ್ಕೆಂದು ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಬಂದಿದ್ದಾಳೆ. ಈ ವೇಳೆ ಮತ್ತೆ ಪ್ರೀತಿಸುವಂತೆ ಒತ್ತಡ ಹೇರಿದ್ದ. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನಾಗೇಶ್ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಘಟನೆಯಿಂದ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಬಳಿಕ ನಾಗೇಶ್ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.










