ಬೆಂಗಳೂರು : ಕೋವಿಡ್ 4ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಿಬಿಎಂಪಿ ಮಾಸ್ಕ್ ಹಾಕದವರ ಮೇಲೆ ಮತ್ತೆ ದಂಡ ವಿಧಿಸಲು ನಿರ್ಧಾರ ಮಾಡಿದೆ. ಸೋಮವಾರದಿಂದಲೇ ಅಂದರೆ ಮೇ 2ರಿಂದಲೇ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದೇ ಇದ್ದರೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಸಾರ್ವಜನಿಕ ಸ್ಥಳದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ. ಈ ಬಗ್ಗೆ ಮಾರ್ಷಲ್ ಗಳು ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಎಲ್ಲ ಜನನಿಬಿಡ ಸ್ಥಳದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರದ ಎಲ್ಲ ಶಾಪಿಂಗ್ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಮತ್ತು ಎಲ್ಲ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಈಗಾಗಲೇ ಮಾರ್ಷಲ್ ಗಳು ಎಲ್ಲಡೆ ಭೇಟಿ ನೀಡಿ ಸರ್ಕಾರದ ಆದೇಶ ತೋರಿಸಿ ಸೂಚನೆ ನೀಡುತ್ತಿದ್ದಾರೆ. ಮೇ 2ರಿಂದ ಮಾಸ್ಕ್ ಧರಿಸದವರಿಗೆ ತಲಾ 250 ರೂ ದಂಡ ವಿಧಿಸುವ ನಿಯಮ ಮರು ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.










