ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಲೆಗೈದ ಪ್ರಿಯಕರ…

101
firstsuddi

ಹಾಸನ: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೋರ್ವ ತನ್ನ ಪ್ರೇಯಸಿಯನ್ನೇ ಕೊಲೆಗೈದಿರುವ ಘಟನೆ ತಾಲ್ಲೂಕಿನ ಅಗಿಲೆ ಗ್ರಾಮ ಸಮೀಪದ ಕುಂತಿ ಬೆಟ್ಟದಲ್ಲಿ ನಡೆದಿದೆ.

ಆಲೂರು ತಾಲ್ಲೂಕಿನ ಕವಳಿಕೆರೆ ನಿವಾಸಿ ಸುಚಿತ್ರಾ (20) ಸಾವನ್ನಪ್ಪಿದ್ದಾರೆ. ಹಾಸನ ತಾಲೂಕಿನ ಶಂಕರನಹಳ್ಳಿಯ ನಿವಾಸಿ ತೇಜಸ್ ಕೊಲೆ ಆರೋಪಿ. ಸುಚಿತ್ರಾ, ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ಹೊರಭಾಗದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಇದೇ ಕಾಲೇಜಿನಲ್ಲಿ ಓದಿದ್ದ ಹಾಸನದವನೇ ಆದ ತೇಜಸ್ ಎಂಬಾತನ ಪರಿಚಯವಾಗಿ ಆತ್ಮೀಯತೆಯೂ ಇತ್ತು.

ತೇಜಸ್ ಸುಚಿತ್ರಾಳನ್ನ ಇಷ್ಟಪಟ್ಟಿದ್ದನಂತೆ, ಆದರೆ ನೀನು ನನಗೆ ಇಷ್ಟ ಇಲ್ಲ ಎಂದು ಸುಚಿತ್ರ ಹೇಳಿದ್ದಕ್ಕೆ ಕೆರಳಿದ್ದ ತೇಜಸ್ ಆಕೆಯನ್ನ ಮಾತನಾಡಲೆಂದು ಕುಂತಿ ಬೆಟ್ಟಕ್ಕೆ ಕರೆದೊಯ್ದು, ಅಲ್ಲಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದನಂತೆ. ಆದರೆ ಆಕೆ ಅದಕ್ಕೆ ಒಪ್ಪದಿದ್ದಾಗ ನನಗೆ ಸಿಗದ ನೀನು ಯಾರಿಗೂ ಸಿಗೋದು ಬೇಡಾ ಎಂದು ಆಕೆಯ ಕುತ್ತಿಗೆ ಸೀಳಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದು, ಘಟನೆ ಬಗ್ಗೆ ಪೋಷಕರು ಕಣ್ಣೀರಿಡುತ್ತಿದ್ದಾರೆ.