ಮೈಸೂರು: ಮನೆಯಲ್ಲಿ ಒಂಟಿಯಾಗಿದ್ದ ಗೃಹಿಣಿಯೊಬ್ಬಳನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಜಿಲ್ಲೆಯ ಕುವೆಂಪು ನಗರದ ಜ್ಯೋತಿ ಕಾನ್ವೆಂಟ್ ಬಳಿ ನಡೆದಿದೆ.
ಮಂಜುಳಾ ಕೊಲೆಯಾದವರು. ಮಂಜುಳಾ ಪತಿ ನಾಗರಾಜು ಮೈಸೂರು ಜಿಲ್ಲೆ ಹೆಚ್ ಡಿ ಕೋಟೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದತ್ತು ಮಗಳು 9 ವರ್ಷದ ಮೇಘಾ ಮೂರನೇ ತರಗತಿ ಓದುತ್ತಿದ್ದಳು. ಪ್ರತಿ ದಿನ ಮಗಳು ಶಾಲೆಗೆ ಹೋದ ನಂತರ ಪತಿ ಕೆಲಸಕ್ಕೆ ಹೋಗುತ್ತಿದ್ದರು. ನಂತರ ಮಂಜುಳಾ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಈ ಬಗ್ಗೆ ಗೊತ್ತಿರುವವರೇ ಮಂಜುಳಾ ಕೊಲೆ ಮಾಡಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗಿದೆ.
ಕಳೆದ ಬುಧವಾರ ಸಂಜೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ದತ್ತು ಮಗಳು ಮೇಘಾ ಶಾಲೆಯಿಂದ ಬಂದ ನಂತರ ಮಂಜುಳಾ ಕೊಲೆಯಾಗಿರುವುದು ಪತ್ತೆಯಾಗಿದೆ. ಮಂಜುಳಾ ಕುತ್ತಿಗೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊಲೆ ಮಾಡಿ ಮನೆಯಲ್ಲಿದ್ದ ನಗದು ಹಾಗೂ ಒಡವೆ ದೋಚಲಾಗಿದೆ.
ಸ್ಥಳಕ್ಕೆ ಕುವೆಂಪು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನೂ ಮಂಜುಳಾ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.










