ಬೆಂಗಳೂರು: ರಾಜ್ಯಾದ್ಯಂತ ಫೆಬ್ರವರಿ 22 ರಿಂದ 6 ರಿಂದ 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮತ್ತು ಕೇರಳ ಗಡಿ ಭಾಗದ ಶಾಲೆಗಳನ್ನು ಹೊರತು ಪಡಿಸಿ, ರಾಜ್ಯದಲ್ಲಿ 6, 7 ಮತ್ತು 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದ್ದು, ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಶಾಲೆಗಳಲ್ಲಿ ಕೇವಲ 8ನೇ ತರಗತಿ ಮಾತ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
1ರಿಂದ 5ನೇ ತರಗತಿಯವರೆಗೆ ವಿದ್ಯಾಗಮ ಯೋಜನೆ ಆರಂಭಿಸುವ ಸಂಬಂಧ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಎರಡನೇ ಹಂತದ ಕೋವಿಡ್ ಇರುವ ಕಾರಣ, ಬೆಂಗಳೂರು ಮತ್ತು ಕೇರಳ ಗಡಿಯಲ್ಲಿ 6 ಮತ್ತು 7ನೇ ತರಗತಿಗಳು ಆರಂಭವಾಗುವುದಿಲ್ಲ, ಆದರೆ 8ನೇ ತರಗತಿಗಳು ಮಾತ್ರ ಆರಂಭವಾಗಲಿವೆ ಎಂದು ವಿಧಾನಸೌಧದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.










