- ರಾಘವೇಂದ್ರ ಕೆ.ಪಿ
ಮೂಡಿಗೆರೆ : ಅವಳದ್ದು ಮುಗ್ಧ ಪ್ರೀತಿ. ಮುಗ್ಧತೆಯಲ್ಲೂ ಹುಚ್ಚು ಪ್ರೇಮ. ಎಷ್ಟು ಅಂದ್ರೆ, ಇನಿಯನೊಟ್ಟಿಗಿದ್ರೆ ಪ್ರಪಂಚವೇ ಶೂನ್ಯದಷ್ಟು. ಅವಳ ಹುಚ್ಚು ಪ್ರೇಮವೇ ಕಾಮಾಂಧನ ಮೂಲ ಬಂಡವಾಳ. ಆಕೆಯ ನಿಸ್ವಾರ್ಥ ಪ್ರೇಮದಲ್ಲಿ ಆತ ಹುಡುಕಿದ್ದು ಬರೀ ಕಾಮ. ಅದಕ್ಕಾಗೇ ಅವಳನ್ನ ಬಲವಂತವಾಗಿ ಡೇಟಿಂಗ್ ಕರೆಯುತ್ತಿದ್ದ. ಆ ಮುಗ್ಧ ಪ್ರೀತಿಗೆ ಇದರ ಅರಿವೇ ಇರಲಿಲ್ಲ. ಜೊತೆಗಾರ ಅಂತ ಆಗೊಮ್ಮೆ-ಈಗೊಮ್ಮೆ ಹೋಗಿ ಬರ್ತಿದ್ಲು. ಎಲ್ಲೂ ದಾರಿ ತಪ್ಪಿರಲಿಲ್ಲ. ಅವಳ ಮೇಲಿನ ಕಾಮ ದಾಹಕ್ಕಾಗಿ ಆತ ಎಲ್ಲಾ ಮಾಡ್ದ. ಆದ್ರೆ, ಹುಚ್ಚು ಪ್ರೇಮದಲ್ಲೂ ಬದುಕಿನ ಜವಾಬ್ದಾರಿ ಅರಿತಿದ್ದ ಆಕೆ ಅದೊಂದಕ್ಕೆ ಮಾತ್ರ ಸುತರಾಮ್ ಒಪ್ಪಲಿಲ್ಲ. ಅದಕ್ಕಾಗೇ, ಬದುಕಿ-ಬಾಳಬೇಕಿದ್ದ 22ರ ಗುಳಿಕೆನ್ನಿ ಸುಂದರಿ ಅದೇ ಪ್ರೀತಿಯಿಂದ ಮಣ್ಣು ಸೇರಿದ್ದಾಳೆ. ಹೌದು, ಸೆಪ್ಟೆಂಬರ್ 17. ಸಂಜೆ 8.30ರ ಸಮಯ. ಬಾಳೆಹೊನ್ನೂರಿನಿಂದ ಕಳಸ ಮಾರ್ಗದ ಮಾಲಗೋಡು ಬಳಿ ರಕ್ತದ ಮಡುವಿನಲ್ಲಿ ಓರ್ವ ಸುಂದರಿ ಬಿದ್ದು ಒದ್ದಾಡ್ತಿದ್ದಾಳೆ. ದಾರಿ ಹೊಕ್ಕರಿಗೆ ಗಾಡಿ ನಿಲ್ಸೋದಕ್ಕೂ ಭಯ. ಮೋಹಿನಿ ಅಂತ. ಬಂದವರೆಲ್ಲಾ ನೋಡಿ-ನೋಡಿ ಹೋಗ್ತಿದ್ರು. ಈಕೆ ಮಾತ್ರ ಸುರಿಯುತ್ತಿದ್ದ ರಕ್ತದ ಮಧ್ಯೆಯೂ ಜೀವ ಉಳಿಸಿ ಅಂತ ಬೇಡಿಕೊಳ್ತಿದ್ಲು. ಅಕ್ಷರಶಃ ಪ್ರಾಣ ಭಿಕ್ಷೆ. ಆದ್ರೆ ರಾತ್ರಿ, ಅದ್ರಲ್ಲೂ ನಿರ್ಜನ ಪ್ರದೇಶವಾದ್ರಿಂದ ಯಾರೂ ಗಾಡಿ ನಿಲ್ಸೋ ಪ್ರಯತ್ನ ಮಾಡ್ಲೇ ಇಲ್ಲ. ಆದ್ರೆ, ನಿಲ್ಸಿದ್ದು ಮಾತ್ರ ಅದೊಂದು ಜೀಪ್. ಆ ಜೀಪಿಗೂ ಕೈಮುಗಿದು ಬೇಡಿದ್ಲು. ಅವರೂ ಕೂಡ ಹೆದರಿ ಹೋದವರು, ಅಪಘಾತವಿರಬಹುದಾ ಅಂತ ಮತ್ತೆ ಹಿಂದಿರುಗಿ ಬಂದವರಿಗೆ ಸಿಡಿಲು ಬಡಿದಂತಾಗಿತ್ತು. ಹೊಟ್ಟೆ, ಪಕ್ಕೆ, ಕುತ್ತಿಗೆ, ಕೆನ್ನೆಯನ್ನ ಕೊಯ್ದಿದ್ದ ಸ್ಥಿತಿ ನೋಡಿ ಹಿಂದೆ-ಮುಂದೆ ನೋಡದೆ ಕಳಸ ಆಸ್ಪತ್ರೆಗೆ ದಾಖಲಿಸಿದ್ರು. ಆಕೆಯನ್ನ ಉಳಿಸಬೇಕೆಂದು ಹೋರಾಡಿದ್ರು. ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಹುಡುಗಿಯ ದೇಹದಿಂದ ರಕ್ತ ಮಾತ್ರ ನಿಂತಿರಲಿಲ್ಲ. ಆ ಮಟ್ಟಕ್ಕೆ ಕೊಯ್ದಿದ್ದ ಆ ಕಾಮಾಂಧ ನರರಾಕ್ಷಸ.

ಆಸ್ಪತ್ರೆಗೆ ಬಂದ ಆ ಗುಳಿಕೆನ್ನೆ ಚೆಲುವೆ ಎಲ್ಲವನ್ನೂ ಹೇಳಿದ್ಲು. ಹೆಸರು ಬಿಂದು… ಊರು ಖಾಂಡ್ಯ ಸಮೀಪದ ಬಾಸಾಪುರ. ಜೊತೆಗೆ ಬಂದದ್ದು ಮಿಥುನ್… ಈ ಸ್ಥಿತಿಗೆ ತಂದಿದ್ದು ಅವನೇ ಅಂತ… ಎಲ್ಲವನ್ನೂ ಹೇಳಿದ್ಲು. ಏಕೆ ಅನ್ನೋದ್ನೂ ಬಿಡಿಸಿಟ್ಟಿದ್ಲು. ಚೂಟಿ, ರೂಪವತಿ, ಬುದ್ಧಿವಂತೆಯಾಗಿದ್ದ ಬಿಂದು ಎರಡು ವರ್ಷದ ಹಿಂದೆ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಮುಗಿಸಿ, ಕೆಲಸದ ಹುಡುಕಾಟದಲ್ಲಿದ್ದಳು. ಇಂದಿನ ಮೊಬೈಲ್ ಯುಗದಲ್ಲಿ ಈಕೆ ಕೂಡ ಫೇಸ್ಬುಕ್ ಅಕೌಂಟ್ ಹೊಂದಿದ್ಲು. ಅಲ್ಲಿ ಗಂಟು ಬಿದ್ದವನೇ ಈ ದುರಾತ್ಮ ಮಿಥುನ್. ಇವ ಕೂಡ ಬಾಳೆಹೊನ್ನೂರು ಸಮೀಪದ ಗಡಿಗೇಶ್ವರ ಗ್ರಾಮದವನು. 6 ತಿಂಗಳ ಹಿಂದಷ್ಟೆ ಈಕೆಗೆ ಪರಿಚಿತನಾಗಿದ್ದ. ಸ್ನೇಹ ಪ್ರೀತಿಗೆ ತಿರುಗಿತ್ತು. ನೋಡಲು ಸುಮಾರಾಗಿದ್ದ ಮಿಥುನನ ನಾಟಕದ ಪ್ರೀತಿ ಈಕೆಗೆ ಅರ್ಥವೇ ಆಗಿರಲಿಲ್ಲ. ಮುಗ್ಧ ಹುಡುಗಿಯ ತಲೆ ಕೆಡಿಸಿ ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದ. ಅದೊಂದರಲ್ಲೇ ಈತ ನಿಸ್ಸೀಮ.

ಆದರೆ, ಅವನ ಕಣ್ಣೋಟ, ಮೈಮಾಟ, ಹಾವ-ಭಾವದಿಂದ ಪ್ರೀತಿ ಹೆಸರಲ್ಲಿ ನನ್ನನ್ನ ಮಿಸ್ ಯೂಸ್ ಮಾಡಿಕೊಳ್ತಿದ್ದಾನೆ ಎಂದು ಯಾವಾಗ ಅನ್ನಿಸಿತು ಅವನಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದ್ಲು ಬಿಂದು. ಅವನು ಎಷ್ಟು ಬೇಗ ಹತ್ತಿರವಾದ್ನೋ, ಈಕೆ ಅಷ್ಟೇ ಬೇಗ ದೂರ ತಳ್ಳಿದ್ಲು. ಯಾಕಂದ್ರೆ, ಅವನದ್ದು ಕಾಮಾಂಧನ ಕಣ್ಣಾಗಿತ್ತು. ಆಕೆಯ ಈ ನಡೆಯೇ ಅವನನ್ನ ಹುಚ್ಚನನ್ನಾಗಿಸಿತ್ತು. ಮತ್ತೆ ಆಕೆಯನ್ನ ಕಾಡ ತೊಡಗಿದ. ಹೊದಲ್ಲಿ-ಬಂದಲ್ಲಿ ಪೀಡಿಸುತ್ತಿದ್ದ. ಹೇಗಾದ್ರು ಆಕೆಯನ್ನ ಪಡೆಯಲೇಬೇಕೆಂದು ಅದೊಂದು ಪ್ಲ್ಯಾನ್ ಮಾಡಿದ. ಸೆಪ್ಟೆಂಬರ್ 16 ರಂದು ಬಿಂದುಗೆ ಕರೆ ಮಾಡಿ ಡೇಟಿಂಗ್ ಬರುವಂತೆ ಸೂಚಿಸಿದ್ದ. ಬರಲ್ಲ ಅಂತ ರಿಪ್ಲೈ ಬರ್ಬೋದೆಂದು ಪ್ಲಾನ್ ರೆಡಿ ಮಾಡ್ಕೊಂಡಿದ್ದ. ಲ್ಯಾಬ್ ಟೆಕ್ನಿಷಿಯನ್ ಮುಗಿಸಿದ್ದ ಬಿಂದು ಕೆಲಸಕ್ಕಾಗಿ ಹುಡುಕಾಟ ನಡೆಸ್ತಿದ್ದದ್ದು ಈತನಿಗೆ ತಿಳಿದಿತ್ತು. ಕೆಲಸ ಕೊಡಿಸೋದಾಗಿ ಹೇಳಿ ಬರಹೇಳಿದ್ದ ಪಾಪಿ.
ಬಡ ಕುಟುಂಬದ ಬಿಂದು ಕೊನೆಗೂ ಕೆಲಸದ ಆಸೆ ಹಾಗೂ ಅನಿವಾರ್ಯದಿಂದ ಅಪ್ಪನಿಗೆ ಗೊತ್ತಿಲ್ಲದಂತೆ ಹೊಸಿಲು ದಾಟಿದ್ಲು. 17ರ ಬೆಳಗ್ಗೆ 11 ಗಂಟೆಗೆ ಕಡಬಗೆರೆಗೆ ಬಂದ ಬಿಂದುವನ್ನ ಮಿಥುನ್ ಪಿಕ್ ಮಾಡಿದ್ದ. ಬೈಕಲ್ಲಿ ಈಕೆಯನ್ನ ಕೂರಿಸಿಕೊಂಡ ಆತ ಹೊರಟಿದ್ದು ಸೀದಾ ಹೊರನಾಡು ಕಡೆಗೆ. ದಾರಿಯುದ್ದಕ್ಕೂ ಎಷ್ಟೆ ಕೇಳಿದ್ರು ತಾನು ಬಯಸಿದ್ದು ಆಕೆಯಿಂದ ಸಿಗಲ್ಲ ಅನ್ನೋದು ಅವನಿಗೆ ಕನ್ಫರ್ಮ್ ಆಗಿತ್ತು. ಸಂಜೆ ಹಿಂದಿರುಗುವಾಗ ಮಾಲಗೋಡು ಬಳಿ ನಿರ್ಜನ ಪ್ರದೇಶದಲ್ಲಿ ಭದ್ರಾ ನದಿಯ ಸಮೀಪ ಬೈಕ್ ನಿಲ್ಲಿಸಿದ. ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ. ಆದ್ರೆ, ಆಕೆ ಆ ಬಿಲ್ ಕುಲ್ ಒಪ್ಪಲೇ ಇಲ್ಲ. ಅವನ ಮತ್ತೊಂದು ಮುಖ ದರ್ಶನಕ್ಕೆ ಇದೇ ಸಾಕ್ಷಿಯಾಗಿತ್ತು. ಕೆಲಸದ ಆಸೆ ತೋರ್ಸಿ ಕರೆದುಕೊಂಡು ಬಂದ ಪಾಪಿ ಮಾಡಲು ಹೊರಟಿದ್ದು ಮಾತ್ರ ಮಣ್ಣು ತಿನ್ನೋ ಕೆಲಸ. ಕೊನೆದಾಗಿ ಕೇಳ್ದ ಒಪ್ತಿಯೋ ಇಲ್ವೋ. ಆಕೆ ಉತ್ತರ ನೋ ಅನ್ನೋದೇ ಆಗಿತ್ತು. ಆಕೆ ಆಗಲ್ಲ ಅಂತಿದ್ದಂತೆ ಕೂತಿದ್ದ ದಂಡೆಯಿಂದ ಭದ್ರಾ ನದಿಗೆ ತಳ್ಳಿದ್ದಾನೆ. ಆಕೆ ಎದ್ದು ಬರೋದನ್ನ ಕಂಡ ಮನಸ್ಸೋ ಇಚ್ಛೆ ಕಲ್ಲು ತೂರಿದ್ದಾನೆ. ಮೇಲೆ ಬಂದ ಕೂಡಲೇ ಕೈಯಲ್ಲಿದ್ದ ಸ್ಕ್ರೂ ಡ್ರೈವರ್ನಿಂದ ಕೆನ್ನೆ, ಕತ್ತು, ಪಕ್ಕೆ ಸೇರಿದಂತೆ ದೇಹದ ಸೂಕ್ಷ್ಮ ಜಾಗಕ್ಕೆ ಚುಚ್ಚಿ ನದಿಗೆ ತಳ್ಳಿ ಬಂದಿದ್ದಾನೆ ಕಾಮಾಂಧ ಪ್ರೇಮಿ.
ಆ ಕ್ಷಣ ದೇಹದಿಂದ ರಕ್ತ ಸುರಿಯುತ್ತಿದ್ರು ಆಕೆಗೆ ಅನ್ನಿಸಿದ್ದು ಇಷ್ಟೆ. ಕಾಮ ಇಲ್ಲವಾದ್ರೆ ಪ್ರೇಮವೇ ಇಲ್ವಾ. ಇಲ್ಲಿ ಪ್ರೀತಿಗೆ ಬೆಲೆಯೇ ಇಲ್ವ ಅಂತ. ನಾನು ನಂಬಿದ್ದು ಇವನನ್ನ ಎಂದು ಅಪ್ಪ-ಅಮ್ಮ ಅಕ್ಕನನ್ನ ನೆನೆದಿದ್ಲು. ಜೀವ ಉಳಿಸಿಕೊಳ್ಳಲು ತಿರುಗಿ ನೋಡದೆ ಹೋದ ಕಾಮಾಂಧನ ಕೂತಿತ್ತು ಆ ಜೀವ. ಆದ್ರೆ, ಕಾಮಕ್ಕಾಗೇ ಪ್ರೇಮ ಅನ್ನೋ ಆ ಥರ್ಡ್ ಕ್ಲಾಸ್ಗೆ ಆಕೆಯ ಪ್ರೀತಿಯ ನೋವಿನ ಕೂಗು ಕೇಳಲೇ ಇಲ್ಲ. ನೀರಿಗೆ ಬಿದ್ದ ಬಿಂದುವಿಗೆ ಎಚ್ಚರವಾಗಿ ನದಿಯಿಂದ ಎದ್ದು ಬರೋ ಪ್ರಯತ್ನ ಮಾಡಿದ್ಲು. ಬಂದವಳು, ಮೈಯಿಂದ ರಕ್ತ ಸುರಿಯುತ್ತಿದ್ರು ಒದ್ದಾಡುತ್ತಲೇ ರಸ್ತೆಗೆ ಬಂದು ಬಿದ್ದಿದ್ಲು. ಆಗಲೇ ಕಳಸದ ಯುವಕರಾದ ಪ್ರವೀಣ್, ಸಂತೋಷ್ ಹಾಗೂ ಔಫ್ ಅವಳನ್ನ ಆಸ್ಪತ್ರೆಗೆ ಸೇರಿಸಿದ್ರು. ಕಳಸದಲ್ಲಿ ವೈದ್ಯರಿಲ್ಲದ ಕಾರಣ ರಾತ್ರಿ 11 ಗಂಟೆಗೆ ಚಿಕ್ಕಮಗಳೂರಿಗೆ ಕರೆತಂದ್ರು. ಅಲ್ಲೂ ಕೂಡ ಆಗಲ್ಲ ಅಂತ ಬಿಂದುವನ್ನ ಕರೆತಂದದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ. ಅಷ್ಟೊತ್ತಿಗಾಗಲೇ ಬಿಂದುವಿನ ಅರ್ಧ ಜೀವ ಹೋಗಿತ್ತು.
ಆದ್ರೆ, ಬದುಕಬೇಕೆಂಬ ಛಲ ಅವಳನ್ನ ನಾಲ್ಕು ದಿನಗಳ ಬದುಕಿಸಿತ್ತು. ಕುಟುಂಬಸ್ಥರು ಎಷ್ಟೇ ಕಷ್ಟಪಟ್ಟರು ಆಕೆ ಉಳಿಯಲಿಲ್ಲ. ಕಣ್ಣೆದುರು ಓಡಾಡ್ತಿದ್ದ ಮಗಳು ಕಣ್ಣೆದುರೇ ಸಾವನ್ನಪ್ಪಿರೋದನ್ನ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಆಗದಂತಾಗಿದೆ. ಈ ಮಧ್ಯೆ ಪಾಪಿ ಮಿಥುನ್ ಕೆಲವು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಅವನ ರಕ್ಷಣೆಗಾಗಿ ತೆರೆಮರೆಯಲ್ಲಿ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ ಅನ್ನೋ ಮಾತು ಕೇಳಿ ಬರ್ತಿದೆ. ಅವನ ರಕ್ಷಣೆಗೆ ನಿಲ್ಲೋರು ಅವನಿಗಿಂತ ಹೀನರು ಅಂದ್ರು ತಪ್ಪಿಲ್ಲ. ಪಾಪಿ, ಕಾಮಾಂಧ ಮಿಥುನ ತನ್ನ ಫೇಸ್ಬುಕ್ ಅಕೌಂಟನ್ನ ಡೀ ಆಕ್ಟಿವೇಟ್ ಮಾಡೋದ್ರ ಜೊತೆ, ಆಕೆಯ ಮೊಬೈಲಿನಲ್ಲೂ ಅವಳ ಫೇಸ್ಬುಕ್ ಖಾತೆಯನ್ನ ಡಿಲೀಟ್ ಮಾಡಿದ್ದಾನೆ. 2 ದಿನ ನಾಪತ್ತೆಯಾಗಿದ್ದೋನು ಕೊನೆಗೆ ಎನ್.ಆರ್.ಪುರ ನ್ಯಾಯಾಧೀಶರೆದುರು ಶರಣಾಗಿದ್ದಾನೆ. ಸದ್ಯ ಬಾಳೆಹೊನ್ನೂರು ಪೊಲೀಸರ ವಶದಲ್ಲಿರೋ ಕೀಚಕ-ಕಿರಾತಕನಿಗೆ ಪರ್ಮನೆಂಟಾಗಿ ಜೈಲಲ್ಲಿ ಮುದ್ದೆ ಮುರಿಸೋಕೆ ಪೊಲೀಸರು ರೆಡಿ ಮಾಡ್ಕೊಂಡಿದ್ದಾರೆ.
ಸ್ನೇಹ ಬೆಳೆಸೋ ಫೇಸ್ಬುಕ್ ಸ್ನೇಹಕಷ್ಟೆ ಸಾಕ್ಷಿಯಾಗಿತ್ತು. ಆದ್ರೆ, ಆಸೆಗಳು ನಮ್ಮನ್ನ ದಾರಿ ತಪ್ಸಿತ್ತು. ಒಪ್ಪದ ಪ್ರೀತಿ ಸ್ನೇಹ ಬಯಸಿತ್ತು. ಸಿಗದ ಪ್ರೀತಿ ದ್ವೇಷ ತರಿಸಿತ್ತು. ಆಕೆ ಬಾರದ ಲೋಕಕ್ಕೆ. ಈತ ಕತ್ತಲ ಕೋಣೆಗೆ. ಹದಿಹರೆಯದ ಇಬ್ಬರ ಬದುಕೂ ಹಾಳು. ಎರಡೂ ಮನೆಯಲ್ಲೂ ಸೂತಕದ ಕರಿಛಾಯೆ. ಆದ್ರೆ, ಫೇಸ್ಬುಕ್ನಲ್ಲಿ ಪರಿಚಿತವಾದ ಗೆಳೆಯನಿಂದ ಆರೇ ತಿಂಗಳಿಗೆ ಹದಿಹರೆಯದ ಸುಂದರಿ ಕೊಲೆಯಾಗ್ತಾಳಂದ್ರೆ ಆಧುನಿಕ ಸಮಾಜ ಎತ್ತ ಸಾಗುತ್ತಿದೆ, ಸಾಮಾಜಿಕ ಜಾಲತಾಣಗಳನ್ನ ಹೇಗೆ ಬಳಸಿಕೊಳ್ತಿದೆ ಅನ್ನೋದನ್ನ ಯೋಚಿಸಬೇಕಿದೆ.









