ಬೆಂಗಳೂರು : ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಮೃತಪಟ್ಟಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ.
ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ದಾರಾವಾಹಿಗಳಲ್ಲಿ ಚೇತನಾ ರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟಿಸಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಿದೆ.
ಚೇತನಾ ರಾಜ್ ನಿನ್ನೆ ಬೆಳಗ್ಗೆ 9:30ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಂತರ ವಿಚಾರ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಹೋಗಿದ್ದರು. ಸರ್ಜರಿ ನಂತರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ನಟಿ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಷ್ಟರಲ್ಲಾಗಲೇ ನಟಿ ಮೃತಪಟ್ಟಿದ್ದಾರೆ.
ಮಗಳ ಸಾವಿಗೆ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯ ವೈದ್ಯರು ಕಾರಣ. ವೈದ್ಯರ ನಿರ್ಲಕ್ಷ್ಯದಿಂದ ಮಗಳ ಸಾವಾಗಿದೆ. ಫ್ಯಾಟ್ ಸರ್ಜರಿಗೆ ಬೇಕಾದ ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ಸರ್ಜರಿಗೆ ವೈದ್ಯರು ಮುಂದಾಗಿದ್ದರು ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.










