ಕೊಟ್ಟಿಗೆಹಾರ: ಕೊರೊನಾ ಹರಡದಂತೆ ಸುರಕ್ಷತಾ ಕ್ರಮ ಕೈಗೊಳ್ಳದೇ ಪ್ರವಾಸಿ ತಾಣ ದೇವರಮನೆಗೆ ಪ್ರವಾಸಿಗರು ಬರುತ್ತಿದ್ದು ಕ್ರಮ ಕೈಗೊಳ್ಳಬೇಕು ಎಂದು ಚೇಗು ಗ್ರಾಮಸ್ಥರು ಬಣಕಲ್ ಗ್ರಾ.ಪಂ ಗೆ ಮನವಿ ಸಲ್ಲಿಸಿದರು.
ಬಣಕಲ್ ವಿಲೇಜ್ ಗ್ರಾಮಸ್ಥ ಪ್ರವೀಣ್ ಮಾತನಾಡಿ ಹಗಲು ರಾತ್ರಿ ಎನ್ನದೇ ಪ್ರವಾಸಿಗರು ದೇವರಮನೆಗೆ ಬರುತ್ತಿದ್ದು ರಾತ್ರಿ ಸಮಯದಲ್ಲಿ ದೇವರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಬಾರದು. ಮಾಸ್ಕ್, ಸ್ಯಾನಿಟೈಸರ್ ಬಳಸದ ಪ್ರವಾಸಿಗರಿಗೆ ದಂಡ ವಿಧಿಸಬೇಕು. ಪ್ರವಾಸಕ್ಕೆ ಬಂದ ಯುವಕ ಯುವತಿಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮೋಜುಮಸ್ತಿಯಲ್ಲಿ ತೊಡಗಿರುವುದು ಕಂಡು ಬರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬಿನ್ನಡಿ ಗ್ರಾಮಸ್ಥ ಶರತ್ ಬಿನ್ನಡಿ ಮಾತನಾಡಿ ದೇವರ ಮನೆಗೆ ಸಾಗುವ ಮಾರ್ಗದಲ್ಲಿ ಸಿಗುವ ಗ್ರಾಮದ ರಸ್ತೆ ಬದಿ ಇರುವ ಶಾಲೆಯಲ್ಲಿ ಕೆಲ ಪ್ರವಾಸಿಗರು ರಾತ್ರಿ ವೇಳೆಯಲ್ಲಿ ಮದ್ಯ ಸೇವನೆ ಮಾಡುತ್ತಾ ಮೋಜುಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಇದರಿಂದ ಸ್ಥಳಿಯರಿಗೆ ಕಿರಿಕಿರಿಯಾಗುತ್ತಿದೆ. ಪ್ರವಾಸಿಗರ ಆಟಾಟೋಪಕ್ಕೆ ಕಡಿವಾಣ ಹಾಕಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ದೇವರಮನೆಯಲ್ಲಿ ಕರೊನಾ ಹರಡದಂತೆ ಸುರಕ್ಷತಾ ಕ್ರಮ ಕೈಗೊಳ್ಳದ ಪ್ರವಾಸಿಗರಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಮನವಿ ಪತ್ರವನ್ನು ಶಾಸಕರು, ಸಂಸದರು. ಪೊಲೀಸ್ ವರಿಷ್ಟಾಧಿಕಾರಿ ಅವರಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
Home ಸ್ಥಳಿಯ ಸುದ್ದಿ ಬಣಕಲ್ : ಸುರಕ್ಷಿತಾ ಕ್ರಮ ಕೈಗೊಳ್ಳದ ಪ್ರವಾಸಿಗರು-ಕ್ರಮ ಕೈಗೊಳ್ಳುವಂತೆ ಚೇಗು ಗ್ರಾಮಸ್ಥರಿಂದ ಗ್ರಾ.ಪಂ.ಗೆ ಮನವಿ…










