ಬಸ್ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದ ಕೆಎಸ್​ಆರ್​ಟಿಸಿ…

44
firstsuddi

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ), ಚಾಲಕರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ನೌಕರರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದೆ. ಅಲ್ಲದೆ, ವಿಶ್ರಾಂತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

ಇಂದಿನಿಂದ ರಾತ್ರಿ ಮತ್ತು ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎಂಟು ಗಂಟೆಗಳಿಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದಲ್ಲಿ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ಸೂಚಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬಸ್ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪಘಾತಕ್ಕೆ ಕಾರಣ ತಿಳಿಯಲು ಕೆಎಸ್​ಆರ್​ಟಿಸಿ ಪ್ರತ್ಯೇಕ ಸಮಿತಿ ಮೂಲಕ ತನಿಖೆ ನಡೆಸಿತ್ತು. ಇದಕ್ಕೆ ಕಾರಣಗಳನ್ನು ಹುಡುಕಿದಾಗ ಡಬಲ್ ಡ್ಯೂಟಿ ಮತ್ತು ರಾತ್ರಿ ವೇಳೆ ವಿಶ್ರಾಂತಿ ನೀಡದಿರುವುದೇ ಕಾರಣ ಅನ್ನೋದು ತಿಳಿದುಬಂದಿತು. ಸರಿಯಾಗಿ ನಿದ್ರೆ ಇಲ್ಲದೇ, ಬಸ್ ಚಾಲನೆ ಮಾಡಲು ಸಾಧ್ಯವಾಗದೇ, ಅಪಘಾತಗಳು ಸಂಭವಿಸುತ್ತಿವೆ ಎಂದು ಸಮಿತಿ ನೀಡಿದ ವರದಿಯಲ್ಲಿ ತಿಳಿದುಬಂದಿತು ಎಂದು ಸಾರಿಗೆ ನಿಗಮ ತಿಳಿಸಿದೆ. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ತನ್ನ ನೌಕರರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದೆ ಎಂದು ಹೇಳಿದೆ.

ಆದೇಶದಲ್ಲಿ ಏನಿದೆ?
* ಕೆಎಸ್​ಆರ್​ಟಿಸಿ ಡ್ರೈವರ್ ಗಳಿಗೆ ವಿಶ್ರಾಂತಿ ಕಡ್ಡಾಯ
* ಇಂದಿನಿಂದ ಡಬಲ್ ಡ್ಯೂಟಿ ಮಾಡಿಸುವಂತಿಲ್ಲ
* 8 ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ
* 8 ಗಂಟೆ & ರಾತ್ರಿ ವೇಳೆಯಲ್ಲಿ ಹೆಚ್ಚು ಡ್ಯೂಟಿ ಡ್ರೈವರ್ ಗಳಿಗೆ ನಿದ್ರೆ ಮತ್ತು ವಿಶ್ರಾಂತಿ ಮಾಡಲು ನಾಲ್ಕೈದು ಗಂಟೆಗಳ ಅವಕಾಶ
* ಇದರಿಂದ ಕೆಎಸ್​ಆರ್​ಟಿಸಿ ಬಸ್ ಗಳ ಅಪಘಾತಗಳು ತಪ್ಪುತ್ತದೆ
* ನೂರಾರು ಅಮಾಯಕರ ಪ್ರಾಣ ಉಳಿಸಲು ಸಹಾಯವಾಗಲಿದೆ.