ಬಹುಜನ ಚಳುವಳಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ಬಹುಜನರ ಮೇಲಿದೆ: ಜಾಕೀರ್ ಹುಸೇನ್.

42
firstsuddi

ಚಿಕ್ಕಮಗಳೂರು: ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ಮತ್ತು ದಾದಾಸಾಹೇಬ್ ಕಾನ್ಸೀರಾಮ್ ಅವರು ಕಟ್ಟಿರುವ ಬಹುಜನ ಚಳುವಳಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ಬಹುಜನರ ಮೇಲಿದೆ ಎಂದು ಬಿ ಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.

ನಗರದ ಬಿಎಸ್ ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸೀರಾಮ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರಿಗೆ ರಾಜಕೀಯ ಅಧಿಕಾರ ಮರೀಚಿಕೆಯಾಗಿದ್ದಂತಹ ಕಾಲದಲ್ಲಿ ಆ ವರ್ಗದ ನೂರಾರು ಶಾಸಕರು ನೂರಾರು ಲೋಕಸಭಾ ಸದಸ್ಯರನ್ನು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಮಹಾತ್ಮರು ಕಾನ್ಸೀರಾಮ್ ಎಂದ ಅವರು ಕಾನ್ಸೀರಾಮ್ ಅವರ ಆ ಋಣವನ್ನು ಬಹುಜನರು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.

ದಾದಾ ಸಾಹೇಬ್ ಕಾನ್ಸೀರಾಮ್ ಅವರ ಬಹುಜನ ಚಳುವಳಿಯಿಂದಾಗಿ ದೇಶದ ಸಂವಿಧಾನವನ್ನು ಉಳಿಸಿಕೊಳ್ಳಲು ಮತ್ತು ದಲಿತರ ರಕ್ಷಣೆ ಸಾಧ್ಯವಾಗಿದೆ ಎಂದ ಜಾಕೀರ್ ಹುಸೇನ್ ಬಹುಜನರು ಆ ಚಳುವಳಿಯಲ್ಲಿ ಪ್ರಾಮಾಣಿಕವಾಗಿ ಮುಂದುವರಿಯಬೇಕು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿ ಎಸ್ ಪಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.

ಲೋಕಸಭಾಕ್ಷೇತ್ರ ಸಮಿತಿ ಸಂಯೋಜಕ ಪಿ ಪರಮೇಶ್ವರ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಜನರೆಲ್ಲರೂ ಒಗ್ಗೂಡಿ ಸಂಘಟಿತರಾಗಿ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಮನವಿ ಮಾಡಿದರು.

ಜನ್ಮದಿನಾಚರಣೆ ಅಂಗವಾಗಿ ಕಾರ್ಯಕರ್ತರಿಗೆ ಸಿಹಿ ವಿತರಿಸಲಾಯಿತು. ಬಿಎಸ್ ಪಿ ತಾಲೂಕು ಅಧ್ಯಕ್ಷ ಹೆಚ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ಕೆ ಎಸ್ ಮಂಜುಳಾ ,ಲೋಕಸಭಾಕ್ಷೇತ್ರ ಸಮಿತಿ ಸಂಯೋಜಕ ಕೆ ಆರ್ ಗಂಗಾಧರ್ ,ಕಚೇರಿ ಕಾರ್ಯದರ್ಶಿ ಪಿ ವಿ ತಂಬನ್, ಮೂಡಿಗೆರೆ ಅಧ್ಯಕ್ಷ ಎಲ್ ಬಿ ರಮೇಶ್ ,ಸಿದ್ದಯ್ಯ, ಗಿರೀಶ್, ಆರ್ ವಸಂತ, ಡಿ ಎಚ್ ವಿಜಯಕುಮಾರ್ ಉಪಸ್ಥಿತರಿದ್ದರು.