ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು: ಜಾಕೀರ್ ಹುಸೇನ್.

64
firstsuddi

ಚಿಕ್ಕಮಗಳೂರು: ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.

ನಗರದ ಬಿಎಸ್ ಪಿ ಕಚೇರಿಯಲ್ಲಿ ಇಂದು ನಡೆದ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಪಕ್ಷದ ಸಂಸ್ಥಾಪಕ ದಾದಾಸಾಹೇಬ್ ಕಾನ್ಸೀರಾಮ್ ಅವರ ಆಶಯಗಳನ್ನು ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಕಂಕಣಬದ್ಧರಾಗಬೇಕು ಕಾನ್ಸೀರಾಮ್ ಅವರ ಮಾತಿನಂತೆ ಈ ಚುನಾವಣೆಯನ್ನು ಯುದ್ಧದಂತೆ ಪರಿಗಣಿಸಿ ಎದುರಿಸಬೇಕು ಎಂದು ಕಿವಿ ಮಾತು ಹೇಳಿದರು.

ದೇಶದಲ್ಲಿ ಪಕ್ಷ ನಡೆಸುತ್ತಿರುವ ಸಾಮಾಜಿಕ ಪರಿವರ್ತನೆ ಮತ್ತು ಸ್ವಾಭಿಮಾನದ ಚಳುವಳಿ ಉಳಿದು ಮುಂದುವರೆಯಬೇಕಾದರೆ ಕಾರ್ಯಕರ್ತರು ಬಿಎಸ್ ಪಿ ಯನ್ನು ಗೆಲ್ಲಿಸಬೇಕು ಕಾರ್ಯಕರ್ತರು ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಚುನಾವಣೆಯಲ್ಲಿ ಕೆಲಸ ಮಾಡಬೇಕು ಸದಾ ಶೋಷಿತರು ಬಡವರು ಹಿಂದುಳಿದವರು ಅಲ್ಪಸಂಖ್ಯಾತರು ದೀನದಲಿತರ ಪರವಾಗಿ ದುಡಿಯುತ್ತಿರುವ ಪಕ್ಷದ ಅಭ್ಯರ್ಥಿ ಕೆ.ಟಿ ರಾಧಾಕೃಷ್ಣ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಬಿ ಎಸ್ ಪಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ ಮಾತನಾಡಿ ಪಕ್ಷದ ಅಭ್ಯರ್ಥಿ ಕೆ.ಟಿ ರಾಧಾಕೃಷ್ಣ ಅವರು ಕಳೆದ ನಾಲ್ಕು ದಶಕಗಳಿಂದ ಸಲ್ಲಿಸಿರುವ ಸೇವೆಯನ್ನು ಹೋರಾಟಗಳನ್ನು ಶೋಷಿತ ವರ್ಗದವರು ಗುರುತಿಸಬೇಕು ಅವರ ಗೆಲುವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಅಲೀಖಾನ್ ಮಾತನಾಡಿ ಈ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಬೇಕಾದರೆ ದಲಿತ ಪರ ಸಂಘಟನೆಗಳೆಲ್ಲವೂ ಒಗ್ಗೂಡಬೇಕು ಶೋಷಿತರು ಸಂಘಟಿತರಾಗಿ ಅಭ್ಯರ್ಥಿ ಪರ ದುಡಿಯಬೇಕು ಎಂದು ಮನವಿ ಮಾಡಿದರು.

ಪಕ್ಷದ ಅಭ್ಯರ್ಥಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಮಾತನಾಡಿ ತಾವು ಕೈಗೊಂಡಿರುವ ಸಾಮಾಜಿಕ ಪರಿವರ್ತನೆ ಮತ್ತು ಸ್ವಾಭಿಮಾನದ ಚಳುವಳಿಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ತಮಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಕ್ಷೇತ್ರ ಸಮಿತಿಯ ಸಂಯೋಜಕರಾದ ಪಿ ಪರಮೇಶ್ವರ್ ಕೆ ಆರ್‍ಗಂಗಾಧರ್ ಜಿಲ್ಲಾ ಸಂಯೋಜಕ ಕೆಎಂ ಗೋಪಾಲ್‍ಯು ಬಿ ಮಂಜಯ್ಯ ಜಿಲ್ಲಾ ಉಪಾಧ್ಯಕ್ಷರಾದ ಕೆ ಎಸ್ ಮಂಜುಳಾ ಬಿ ಎಂ ಶಂಕರ್ ಪಿ ಕೆ ಮಂಜುನಾಥ್ ಉಪಸ್ಥಿತರಿದ್ದರು.