ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.
ನಟಿ ಮೀನಾ ಪತಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಕೆಲವು ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗಲಿಲ್ಲ ಎಂದು ತಿಳಿದುಬಂದಿದೆ. ವೈದ್ಯರು ಔಷಧಿಗಳ ಮೂಲಕ ಪರಿಸ್ಥಿತಿಯನ್ನು ಗುಣಪಡಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗದೇ ಅವರು ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಸೇರಿದಂತೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರು ಬೆಂಗಳೂರು ಮೂಲದ ವಿದ್ಯಾಸಾಗರ್ ಎಂಬುವವರನ್ನು 2009 ರಲ್ಲಿ ಮದುವೆಯಾಗಿದ್ದರು. ಅಲ್ಲದೇ ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ, ಇನ್ನು, ವಿದ್ಯಾ ಸಾಗರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಮದುವೆಯ ನಂತರ ಈ ಜೋಡಿ ಚೆನ್ನೈನಲ್ಲಿ ವಾಸಿಸುತ್ತಿದ್ದರು.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ 1982 ರಲ್ಲಿ ನೆಂಜಂಗಲ್ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ನವಯುಗಂ ಎಂಬ ತೆಲುಗು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪರಿಚಿತರಾದರು. ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಇವರು ನಟಿಸಿದ್ದಾರೆ.










