ಬೆಂಗಳೂರು : ಬಿಜೆಪಿ ಸರ್ಕಾರದ ಬಗ್ಗೆ ನನಗೆ ಅನುಮಾನಗಳು ಕಾಡತೊಡಗಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು ಹೇಳಿದ್ದಾರೆ. ನಿನ್ನೆ ರಾತ್ರಿ ಎಂಜಿಆರ್ ಬರ್ತ್‍ಡೇ ಕಾರ್ಯಕ್ರಮದಲ್ಲಿ ಲಘು ವಸ್ತುವೊಂದು ಸ್ಪೋಟಗೊಂಡು ಶಾಸಕ ಹ್ಯಾರಿಸ್ ಅವರ ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಶಾಸಕ ಹ್ಯಾರಿಸ್ ಅವರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಬಗ್ಗೆ ನನಗೆ ಅನುಮಾನ ಕಾಡತೊಡಗಿದೆ. ಶಾಸಕ ತನ್ವೀರ್ ಸೇಠ್ ಹಾಗೂ ಹ್ಯಾರೀಸ್ ಅವರ ಮೇಲೆ ನಡೆದ ಘಟನೆಗಳಿಂದ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುವುದು ಅರ್ಥವಾಗುತ್ತಿಲ್ಲ. ಇದರಿಂದ ನಾನು ವಿಚಲಿತನಾಗಿದ್ದೇನೆ. ಅಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರ ನನಗೆ ನೀಡಿರುವ ಭದ್ರತೆಯನ್ನು ಹಿಂಪಡೆಯಲು ಮುಂದಾಗಿದೆ ಎಂಬ ಮಾಹಿತಿ ನನಗೆ ತಿಳಿದು ಬಂದಿದೆ. ನಾನು ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಭದ್ರತೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ ಎಂದರು.
ಇದೇ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಆದಿತ್ಯ ರಾವ್ ಅವರು ಪೊಲೀಸರಿಗೆ ಶರಣಾಗಿರುವ ಬಗ್ಗೆ ಪ್ರತಿಕ್ರಯಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ವ್ಯಕ್ತಿ ಆದಿತ್ಯ ರಾವ್ ಡಿಜಿ ಕಚೇರಿಗೆ ಬಂದು ಶರಣಾಗಿದ್ದಾರೆ. ಬಾಂಬರ್ ಶರಣಾಗುವುದಕ್ಕೂ ಮೊದಲು ಬಾಂಬ್ ಇಟ್ಟಿರುವವರು ಮುಸ್ಲಿಮರು ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದರು. ದೇವರು ದೊಡ್ಡವನು ಬಾಂಬರ್ ಹೋಗಿ ಶರಣಾಗಿದ್ದಾರೆ. ಒಂದು ವೇಳೆ ಬಾಂಬರ್ ಸಿಗದೇ ಇದ್ದಿದ್ದರೆ ಬಿಜೆಪಿಯವರು ಮುಸ್ಲಿಮರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.










