ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು 2 ಕಿ.ಮೀ ಹೊತ್ತೊಯ್ದ ಕಾರು ಚಾಲಕಿ.

47
firstsuddi

ಬೆಂಗಳೂರು : ನಗರದ ಮಾಗಡಿ ರಸ್ತೆಯಲ್ಲಿ 25 ವರ್ಷದ ಯುವಕನೊಬ್ಬ ಬೈಕ್ ನಲ್ಲಿ ವೃದ್ಧನನ್ನು ಎಳೆದೊಯ್ದ ಅಮಾನವೀಯ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ನಡೆದಿದೆ.

ಟಾಟಾ ನೆಕ್ಸನ್ ಕಾರನ್ನು ಪ್ರಿಯಾಂಕ ಎಂಬ ಮಹಿಳೆ ಚಲಾಯಿಸುತ್ತಿದ್ದು, ಮಾರುತಿ ಸ್ವಿಫ್ಟ್ ಕಾರನ್ನು ದರ್ಶನ್ ಎಂಬುವರು ಚಲಾಯಿಸುತ್ತಿದ್ದರು. ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ 2 ಕಾರುಗಳ ನಡುವೆ ಸಣ್ಣ ಅಪಘಾತ ಸಂಭವಿಸಿದೆ.

ಇದನ್ನು ಪ್ರಶ್ನಿಸಲು ಬಂದ ದರ್ಶನ್ ಮೇಲೆ ದರ್ಪ ತೋರಿದ ಪ್ರಿಯಾಂಕ, ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಕೋಪಗೊಂಡ ದರ್ಶನ್ ಕಾರು ಹಿಂಬಾಲಿಸಿಕೊಂಡು ಹೋಗಿ ಮಹಿಳೆಯ ಕಾರು ಅಡ್ಡಗಟ್ಟಿ ಮತ್ತೆ ಪ್ರಶ್ನೆ ಮಾಡಿದ್ದಾರೆ. ಕೋಪಗೊಂಡ ಪ್ರಿಯಾಂಕ ಅವರು ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ರವರು ಕಾರಿನ ಬಾನೆಟ್ ಮೇಲೆ ಹತ್ತಿದ್ದಾರೆ.

ಈ ವೇಳೆ ಏಕಾಏಕಿ ಟಾಟಾ ನೆಕ್ಸಾನ್ ಕಾರು ಚಲಾಯಿಸುತ್ತಿದ್ದ ಮಹಿಳೆ ಬಚಾವ್ ಆಗಲು ನೆಕ್ಸಾನ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದ ದರ್ಶನ್ ಅವರನ್ನು ಸುಮಾರು 2 ಕಿಲೋ ಮೀಟರ್ ವರೆಗೂ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ದರ್ಶನ್ ಕಡೆಯವರು ಬಂದು ಕಾರ್ ಅಡ್ಡಗಟ್ಟಿ ಕಾರಿನ ಗ್ಲಾಸುಗಳನ್ನು ಹೊಡೆದು ಹಾಕಿ ಜೊತೆಗೆ ಪ್ರಿಯಾಂಕರವರ ಗಂಡ ಪ್ರಮೋದ್ ರವರ ಮೇಲೂ ಹಲ್ಲೆ ನಡೆಸಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೂ ದೂರು ಪ್ರತಿದೂರು ದಾಖಲಾಗಿದ್ದು, ಕಾರು ಚಾಲಕಿ ಮೇಲೆ ಕೊಲೆಯತ್ನ ಹಾಗೂ ನೆಗ್ಲಿಜೆನ್ಸಿ ಡ್ರೈವಿಂಗ್ ನಡಿ ಪ್ರಕರಣ ದಾಖಲಿಸಲಾಗಿದೆ. ದರ್ಶನ್ ಮೇಲೆ ಹಲ್ಲೆ ಮತ್ತು ಗಲಭೆ ಮಾಡಿ ಕಾರು ಧ್ವಂಸ ಕೇಸ್ ನಡಿ ಪ್ರಕರಣ ದಾಖಲಿಸಲಾಗಿದೆ.

ಕಾರು ನಿಲ್ಲಿಸಿದ ಮೇಲೆ ಪ್ರಿಯಾಂಕ, ಪ್ರಮೋದ್ ಮೇಲೆ ಹಲ್ಲೆ ಮಾಡಿದ್ದಕ್ಕೆ ದರ್ಶನ್ ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಪ್ರಿಯಾಂಕ, ದರ್ಶನ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.