ವೇಶ್ಯೆ ಎಂಬ ಪದ ಬಳಸಿದ ಫೂಟೇಜ್ ಕೊಟ್ಟರೆ ರಾಜೀನಾಮೆ ನೀಡಲು ಸಿದ್ಧ : ಬಿ.ಕೆ ಹರಿಪ್ರಸಾದ್

67
firstsuddi

ಬೆಂಗಳೂರು : ನಾನು ವೇಶ್ಯೆ ಎಂಬ ಪದ ಬಳಸಿಲ್ಲ. ಒಂದು ವೇಳೆ ನಾನು ವೇಶ್ಯೆ ಪದ ಬಳಸಿದ ಫೂಟೇಜ್ ನೀಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ವಲಸಿಗರನ್ನು ಟೀಕಿಸುವ ಭರದಲ್ಲಿ ಬಿ.ಕೆ ಹರಿಪ್ರಸಾದ್ ಹೊಸಪೇಟೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಲಸಿಗರು ವೇಶ್ಯೆಯರ ಮಾದರಿಯಲ್ಲಿ ತಮ್ಮ ಸ್ಥಾನವನ್ನು ಮಾರಿಕೊಂಡರು ಎಂದು ಆನಂದ್ ಸಿಂಗ್ ಹೆಸರೇಳದೇ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ವಲಸಿಗರನ್ನು ವೇಶ್ಯೆಯರಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆ ತುಂಬಾ ಚರ್ಚೆಗೆ ಕೂಡ ಗ್ರಾಸವಾಗಿತ್ತು. ಸದ್ಯ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ ಅವರು, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಗೌರವ ಇದೆ. ಈವರೆಗೆ ಎಲ್ಲೂ ನನ್ನ ಮೇಲೆ ಯಾವುದೇ ಆರೋಪ ಬಂದಿಲ್ಲ. ನನ್ನ ಮೇಲೆ ಈ ರೀತಿಯ ಕೇಸ್ ಎಲ್ಲೂ ಇಲ್ಲ. ಗಲಾಟೆ, ಹೋರಾಟದ ಬಗ್ಗೆ ಮಾತ್ರ ದೂರು ಇದೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ನಾನು ಮಾತಾಡಿಲ್ಲ. ನಾನು ಈಗಾಗಲೇ ಈ ಬಗ್ಗೆ ಕ್ಷಮಾಪಣೆ ಕೇಳಿದ್ದೇನೆ ಎಂದರು.

ನಾನು ವೇಶ್ಯೆ ಎಂಬ ಪದ ಬಳಕೆ ಮಾಡಿಲ್ಲ. ನಾನು ಮಿಸ್ ಬಿಹೇವ್ ಮಾಡಿದ ಉದಾಹರಣೆ ಎಲ್ಲಿಯೂ ಇಲ್ಲ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಗೌರವ ಇದೆ. ನಾನು ವೇಶ್ಯೆ ಎಂಬ ಪದ ಬಳಸಿದ ಫೂಟೇಜ್ ಕೊಟ್ಟರೆ ನಾನು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದು ತಿಳಿಸಿದರು.