ನವದೆಹಲಿ : ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಅಂದು ಘಟನೆ ನಡೆದ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಕೂಡಾ 3 ತಿಂಗಳುಗಳ ಕಾಲ ಅಮಾನತುಗೊಳಿಸಿದೆ.
2022ರ ನವೆಂಬರ್ 26ರಂದು ಈ ಘಟನೆ ನಡೆದಿತ್ತು. ಅಂದು ವಿಮಾನದ ವಾಚ್ ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿರುವುದಾಗಿ ತಿಳಿಸಿದೆ.
ನವೆಂಬರ್ 27 ರಂದು ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಈ ಘಟನೆಯ ಬಗ್ಗೆ ಪತ್ರ ಬರೆದಿದ್ದರು. ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ. ಎರಡು ದಿನಗಳ ನಂತರ ದೆಹಲಿ ಪೊಲೀಸರು ಶಂಕರ್ ಮಿಶ್ರಾನನ್ನು ಬಂಧಿಸಿದ್ದರು. ಆರೋಪಿಗೆ 4 ತಿಂಗಳ ಕಾಲ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.
ಶಂಕರ್ ಮಿಶ್ರಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ಮಹಿಳೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮಹಿಳೆ ಸಂಪೂರ್ಣವಾಗಿ ಸುಳ್ಳು ಮತ್ತು ಅವಹೇಳನಕಾರಿ ಎಂದು ಈ ಆರೋಪವನ್ನು ತಳ್ಳಿಹಾಕಿದ್ದಾರೆ.










