ವಿಜಯಪುರ : ಜಿಲ್ಲೆಯ ಸಿಂದಗಿ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ(54) ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ನಾಗಠಾಣ ಮತಕ್ಷೇತ್ರದಲ್ಲಿ ನಡೆದ ಪಕ್ಷದ ಪಂಚರತ್ನ ಕಾರ್ಯಕ್ರಮದಲ್ಲಿ ಹೆಚ್.ಡಿ ಕುಮಾರಸ್ವಾಮಿಯೊಂದಿಗೆ ಶಿವಾನಂದ ಭಾಗಿಯಾಗಿದ್ದರು. ನಂತರ ಸಂಜೆ ಸಿಂದಗಿ ಪಟ್ಟಣಕ್ಕೆ ತೆರಳಿದ್ದರು. ರಾತ್ರಿ 9ರ ವೇಳೆಗೆ ಅಸ್ವಸ್ಥಗೊಂಡ ಶಿವಾನಂದ ಪಾಟೀಲ್ ಸೋಮಜಾಳ, ಸಿಂದಗಿ ಪಟ್ಟಣದ ವಾತ್ಸಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಹೃದಯಾಘಾತದಿಂದ ಶಿವಾನಂದ ಕೊನೆಯುಸಿರೆಳೆದಿದ್ದಾರೆ.
ಹದಿನಾರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಪತ್ನಿ ವಿಶಾಲಾಕ್ಷಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ಶಿವಾನಂದ ಪಾಟೀಲ್ ಸೋಮಜಾಳ ನಿಧನ ಹಿನ್ನೆಲೆ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಶಿವಾನಂದ ಸೋಮಜಾಳ ಅಕಾಲಿಕ ಮರಣ ನನಗೆ ಆಘಾತ ತಂದಿದೆ. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಅವರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಪರಿಚಯವಾದ ಅಲ್ಪಕಾಲದಲ್ಲೇ ಆತ್ಮೀಯರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.










