ಲಂಡನ್ : ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುತ್ತಿರುವಾಗ ಚಲಿಸುತ್ತಿದ್ದ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರಿಷಿ ಸುನಕ್ ಸೀಟ್‌ಬೆಲ್ಟ್ ಹಾಕಿರಲಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸಿದರೂ ಲಂಕಾಶೈರ್ ಪೊಲೀಸರು ರಿಷಿ ಸುನಕ್ ಅವರಿಗೆ 100 ಪೌಂಡ್ (ಸುಮಾರು 10 ಸಾವಿರ ರೂ.) ದಂಡವನ್ನು ವಿಧಿಸಿದ್ದಾರೆ.
ಲಂಕಾಶೈರ್ ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೀಟ್‌ಬೆಲ್ಟ್ ಧರಿಸದೇ ಇರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಬಳಿಕ ನಾವು ಶುಕ್ರವಾರ ಲಂಡನ್ ನ 42 ವರ್ಷದ ವ್ಯಕ್ತಿಗೆ ಷರತ್ತುಬದ್ಧವಾಗಿ ದಂಡ ವಿಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನಕ್ ಅವರ ವಕ್ತಾರರು ಸ್ಪಷ್ಟನೆ ನೀಡಿ, ಅವರಿಂದ ಸಣ್ಣ ಲೋಪವಾಗಿದೆ. ಸಣ್ಣ ವಿಡಿಯೋ ಮಾಡಲು ಪ್ರಧಾನ ಮಂತ್ರಿ ಅವರು ತಮ್ಮ ಸೀಟ್‌ಬೆಲ್ಟ್ ಅನ್ನು ತೆಗೆದುಹಾಕಿದ್ದಾರೆ. ಅವರು ತಮ್ಮ ತಪ್ಪನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆಯಾಚಿಸುತ್ತಾರೆ. ಪ್ರತಿಯೊಬ್ಬರೂ ಸೀಟ್‌ಬೆಲ್ಟ್ ಧರಿಸಬೇಕು ಎಂದು ಪ್ರಧಾನಿ ಮನವಿಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ದೇಶದಾದ್ಯಂತ 100 ಕ್ಕೂ ಹೆಚ್ಚು ಯೋಜನೆಗಳಿಗೆ ಧನಸಹಾಯ ಮಾಡಲು ‘ಲೆವೆಲಿಂಗ್ ಅಪ್ ಫಂಡ್’ ಅನ್ನು ಘೋಷಿಸಲು ಸುನಕ್ ಈ ವಿಡಿಯೋವನ್ನು ಮಾಡಿದ್ದರು. ವಿಡಿಯೋದಲ್ಲಿ, ಮೋಟಾರು ಸೈಕಲ್ ಗಳಲ್ಲಿ ಬಂದ ಪೊಲೀಸ್ ಸಿಬ್ಬಂದಿ ಅವರ ಕಾರನ್ನು ಸುತ್ತುವರೆದು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ.










