ಬೆಂಗಳೂರು : ಬೆಳ್ಳಂಬೆಳಗ್ಗೆಯೇ 300ಕ್ಕೂ ಹೆಚ್ಚು ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ 50 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು, ಬಾಗಲಕೋಟೆ ಸೇರಿದಂತೆ ಹಲವೆಡೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ 50ಕ್ಕೂ ಹೆಚ್ಚು ಕಡೆ ಗುತ್ತಿಗೆದಾರರು ಹಾಗೂ ಚಾರ್ಟೆಡ್ ಅಕೌಂಟೆಂಟ್ಸ್ ಮನೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಬೆಳಗ್ಗೆ 5 ಗಂಟೆಯಿಂದಲೇ ದಾಖಲಾತಿಗಳ ಪರಿಶೋಧನೆ ಕೆಲಸ ನಡೆಯುತ್ತಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿ ನೀರಾವರಿ ಇಲಾಖೆಯ ಚಾರ್ಟೆಡ್ ಅಕೌಂಟೆಂಟ್ ಎನ್ನಲಾಗುತ್ತಿರುವ ಅಮಲಾ ಎಂಬುವರ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ನೀರಾವರಿ ಇಲಾಖೆಗೆ ಸಂಬಂಧಿಸಿದ 30 ಕಾಂಟ್ರಾಕ್ಟರ್ಗಳ ಮನೆಗಳ ಮೇಲೂ ದಾಳಿ ನಡೆದಿದೆ. ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್ಪ್ರೈಸಸ್ ಮೇಲೆ ಐಟಿ ದಾಳಿ ನಡೆಸಿ ಓರ್ವನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ರಾಹುಲ್ ಎಂಟರ್ಪ್ರೈಸಸ್ ನೀರಾವರಿ ಇಲಾಖೆಯ ಟೆಂಡರ್ ಗಳಿಗೆ ಕಬ್ಬಿಣ ಹಾಗೂ ಸಿಮೆಂಟ್ ಸರಬರಾಜು ಮಾಡುತ್ತಿತ್ತು ಎನ್ನಲಾಗಿದೆ. ಪರಿಶೀಲನೆ ವೇಳೆ ಮೂಟೆಗಟ್ಟಲೆ ದಾಖಲೆಗಳು ಪತ್ತೆಯಾಗಿವೆ.
ಇನ್ನೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ದಾಳಿ ನಡೆದಿದೆ. ರಾಜಾಜಿನಗರದ ಭಾಷ್ಯಂ ಸರ್ಕಲ್ನಲ್ಲಿರುವ ಮನೆ ಮೇಲೆ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ಹಿಂದೆ ಉಮೇಶ್ ಬಿಎಂಟಿಸಿ ಚಾಲಕನಾಗಿದ್ದು, ಬಳಿಕ ಗುತ್ತಿಗೆದಾರನಾಗಿ ಗುರುತಿಸಿಕೊಂಡಿದ್ದರು. ರಾಮಯ್ಯ ಲೇಔಟ್ ನಾಗಸಂದ್ರ ಮೆಟ್ರೋ ಹಿಂಭಾಗದಲ್ಲಿ ಹೊಸದಾಗಿ ಬಂಗಲೆ ಕಟ್ಟಿಸಿದ್ದರು. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ನಡೆದಿದೆ.










