ಬೆಂಗಳೂರಿನಲ್ಲಿ ತಾಯಿ – ಮಗಳ ಬರ್ಬರ ಹತ್ಯೆ!

72
firstsuddi

ಬೆಂಗಳೂರು : ನಗರದ ಬೇಗೂರು ಠಾಣಾ ವ್ಯಾಪ್ತಿಯ ಚೌಡೇಶ್ವರಿ ಲೇಔಟ್ ನಲ್ಲಿ ತಾಯಿ-ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ನಡೆದಿದೆ.

ಚಂದ್ರಕಲಾ (36) ಹಾಗೂ ರಾತನ್ಯ (4) ಕೊಲೆಯಾದವರು. ನಿನ್ನೆ ಮಧ್ಯಾಹ್ನ ಕೊಲೆಯಾಗಿದ್ದು, ಸಂಬಂಧಿಕರು ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ನಗರಕ್ಕೆ ಬಂದು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಚಂದ್ರಕಲಾ ಕುಟುಂಬ ವಾಸವಾಗಿತ್ತು. ಮೃತರ ಗಂಡ ಚೆನ್ನವೀರ ಸ್ವಾಮಿ ಗಾರ್ಮೆಂಟ್ಸ್ ನೌಕರನಾಗಿದ್ದಾರೆ. ಇವರು ಮೂಲತಃ ಚಿತ್ರದುರ್ಗದ ಬಂಗಾರಕ್ಕನ ಹಳ್ಳಿ ನಿವಾಸಿಗಳಾಗಿದ್ದಾರೆ.

ಆಯುರ್ವೇದಿಕ್ ವಸ್ತುಗಳ ಆನ್‌ಲೈನ್ ಮಾರ್ಕೆಟಿಂಗ್ ಮಾಡುತ್ತಿದ್ದ ಚಂದ್ರಕಲಾ ಮನೆಯಲ್ಲಿ ಇರುತ್ತಿದ್ದರು. ಚಂದ್ರಕಲಾ ಪತಿ ಬೆಳಿಗ್ಗೆ 9.30ರ ಸುಮಾರಿಗೆ ಕೆಲಸಕ್ಕೆ ಹೋಗಿರುವುದನ್ನು ಗಮನಿಸಿರುವ ಆರೋಪಿಗಳು 10.30ರ ಸುಮಾರಿಗೆ ಮನೆಗೆ ನುಗ್ಗಿದ್ದಾರೆ. ಮದ್ಯಾಹ್ನ 2 ಗಂಟೆಗೆ ಅಪರಿಚಿತ ಮನೆಯಿಂದ ತೆರಳಿದ್ದಾನೆ.

ಮಗು ಹಾಗೂ ತಾಯಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸುಮಾರು 15 – 20 ಬಾರಿ ಚಾಕುವಿನಿಂದ ಇರಿಯಲಾಗಿದೆ. ಚಂದ್ರಕಲಾ ಅವರ ಮೃತದೇಹ ಡ್ರಾಯಿಂಗ್ ರೂಮ್ ನಲ್ಲಿ ಬಿದ್ದಿದ್ದರೆ, ಮಗುವಿನ ಮೃತದೇಹ ಮತ್ತೊಂದು ಕೋಣೆಯಲ್ಲಿ ಬಿದ್ದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಂದ್ರಕಲಾಗೆ ಪರಿಚಯವಿರುವ ವ್ಯಕ್ತಿಯಿಂದಲೇ ಕೃತ್ಯ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್. ಮುರುಗನ್ ಅವರು, ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಭೇದಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.