ಬೆಂಗಳೂರು : ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ ಅವರು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಯಲಹಂಕದಿಂದ ಗೋಪಾಲಕೃಷ್ಣ ಅವರು ಎಸ್. ಆರ್ ವಿಶ್ವನಾಥ್ ಚುನಾವಣೆಯಲ್ಲಿ ವಿರುದ್ಧವಾಗಿ ನಿಂತು ಸೋತಿದ್ದರು. ಎಸ್. ಆರ್ ವಿಶ್ವನಾಥ್ ಅವರನ್ನು ಕೊಲೆ ಮಾಡಲು ಗೋಪಾಲಕೃಷ್ಣ ತನ್ನ ಆಪ್ತ ಕುಳ್ಳ ದೇವರಾಜ್ ಗೆ ಸುಪಾರಿ ಕೊಟ್ಟಿರುವ ಎರಡು ವೀಡಿಯೋ ಹಾಗೂ ಆಡಿಯೋ ಬಹಿರಂಗವಾಗಿದೆ.
ವೀಡಿಯೋದಲ್ಲಿ ಏನಿದೆ? : ವಿಶ್ವನಾಥ್ ವಿರುದ್ಧ ಗೆಲ್ಲಲು ನೂರು ಕೋಟಿ ಮಾಡಬೇಕು. ಐದು ಕೋಟಿ ರೂ. ಕೊಡ್ತೀನಿ ನೀವೇ ಹೊಡೆದು ಹಾಕಿಬಿಡಿ. ಆಂಧ್ರದಿಂದ ಶಾರ್ಪ್ ಶೂಟರ್ ಗಳ ಕರೆಸಿ ಹೊಡೆಸೋಣ. ಕಾರ್ ನಲ್ಲಿ ಹೋಗುವಾಗ ಅಟ್ಯಾಕ್ ಮಾಡಬಾರದು, ನಾಗಶೆಟ್ಟಿಯಲ್ಲಿ ಮಾಡೋಣ. ತೋಟ ಇರುವ ಜಾಗ ನೋಡಿ ಮಾಡೋಣ ಎಂದು ಹೇಳಿದ್ದಾರೆ.
ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಗರದ ಸಿಸಿಬಿ ಪೊಲೀಸರು ಗೋಪಾಲಕೃಷ್ಣ ಅವರನ್ನು ವಶಕ್ಕೆ ಪಡೆದು ಇಡೀ ರಾತ್ರಿ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ, ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸುವ ಬಗ್ಗೆ ವಿಡಿಯೋ ಮಾಡಿದ್ದ ದೇವರಾಜ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.










