8 ವಾರದೊಳಗೆ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ…

58
firstsuddi

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಚುನಾವಣೆ ನಡೆಸುವ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಚುನಾವಣಾ ಪ್ರಕ್ರಿಯೆಯನ್ನು 8 ವಾರಗಳಲ್ಲಿ ಆರಂಭಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ನ್ಯಾ. ಕಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರದೊಳಗಾಗಿ ನಡೆಸುವಂತೆ ತಿಳಿಸಿದೆ. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡನೆ ಮತ್ತು ಮೀಸಲಾತಿಯನ್ನು ಕಾಲಮಿತಿಯೊಳಗೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಗೆ ಯಾವುದೇ ಸಬೂಬು ಹೇಳಬಾರದು. ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು. ಬಾಕಿ ಇರುವ ಸ್ಥಳೀಯ ಸಂಸ್ಥೆಗಳಿಗೆ ಎರಡು ವಾರದೊಳಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕು ಎಂದು ಈ ಹಿಂದೆ ಸೂಚನೆ ನೀಡಿತ್ತು.

ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದ ನಂತರ ಕರ್ನಾಟಕ ರಾಜಕಾರಣದಲ್ಲೂ ಸಂಚಲನ ಮೂಡಿತ್ತು. ಒಂದೂವರೆ ವರ್ಷಗಳಿಂದ ಚುನಾವಣೆ ಬಾಕಿ ಇರುವ ಬಿಬಿಎಂಪಿಗೆ ಇನ್ನು ಎರಡು ವಾರದೊಳಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಈ ಮೊದಲು ತಡೆಯಾಜ್ಞೆ ನೀಡಿದ ಕಾರಣ ಮಧ್ಯಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅನ್ವಯಿಸುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ.