ಬೆಂಗಳೂರು : ಕೊರೊನಾ ಪೀಡಿತರಿಗೆ ಬೆಡ್ ಹಂಚುವ ಬಿವಿಎಂಪಿ ವಾರ್ ರೂಮಿನಲ್ಲಿ ಹಗರಣ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರು ಬಿಬಿಎಂಪಿ ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದಿರುವುದು ಬೇಸರವನ್ನುಂಟುಮಾಡಿದೆ. ವಾರ್ ರೂಮಿನಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಅಲ್ಲದೇ ಅಲ್ಲಿ ನನಗೆ ಯಾವುದೇ ವೈದ್ಯರೂ ಗೊತ್ತಿಲ್ಲ. ಯಾವುದೇ ಕೋಮು ಭಾವನೆ ಇಲ್ಲದೆ, ಎಲ್ಲಾ ಸಮುದಾಯದ ಜನರಿಗೂ ಬೆಡ್ ಒದಗಿಸಲು, ಆಕ್ಸಿಜನ್ ನೀಡಲು ರಾತ್ರಿ ಹಗಲು ದುಡಿದಿದ್ದೇನೆ. ಹೀಗಿದ್ದರೂ ನನ್ನನ್ನೂ ಆರೋಪಿಯನ್ನಾಗಿಸಿರುವುದು ನನಗೆ ಆಘಾತ ತಂದಿದೆ. ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ನನ್ನ ಕಾರ್ಯವೇನಿದ್ದರೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ. ವಾರ್ ರೂಮ್ ಗೆ ಬೇಕಾದ ವೈದ್ಯರು ಅಥವಾ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವುದು ಆಯಾ ಬಿಬಿಎಂಪಿ ವಲಯಗಳ ಕೆಲಸವಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗ ಪತ್ರ ಬರೆದ್ದಾರೆ.
ಹಜ್ ಭವನಕ್ಕೆ ತಮ್ಮದೇ ಕೋಮಿನ ಅಧಿಕಾರಿಯನ್ನು ಬೇರೆ ವಾರ್ಡ್ನಿಂದ ತಂದು ನೇಮಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಇದಕ್ಕೆ ಉತ್ತರಿಸಿದ ಅವರು, ಹಜ್ ಭವನವನ್ನು 140 ಬೆಡ್ ವ್ಯವಸ್ಥೆಯುಳ್ಳ ಆಕ್ಸಿಜನ್ ಸೌಲಭ್ಯವುಳ್ಳ ಕೊವಿಡ್ ಕೇರ್ ಕೇಂದ್ರವಾಗಿ ನಾನು ಪರಿವರ್ತಿಸಿದ್ದೇನೆ. ಈ ಹಜ್ ಭವನದಲ್ಲಿ ಸೇರಿಸಿಕೊಂಡು ಆರೈಕೆ ಮಾಡುತ್ತಿರುವ ಕೋವಿಡ್ ರೋಗಿಗಳಲ್ಲಿ 90% ರೋಗಿಗಳು ಇತರೆ ಧರ್ಮದ ನನ್ನ ಸಹೋದರರಾಗಿದ್ದಾರೆ, ಕೇವಲ 10% ರೋಗಿಗಳು ಮಾತ್ರ ಮುಸ್ಲಿಮರಾಗಿದ್ದಾರೆ. ನಾನು ನಂಬಿಕೊಂಡು ಬಂದ ಮತ್ತು ಈಗಲೂ ನಂಬಿರುವ ತತ್ವ ಏನೆಂದರೆ ಅಲ್ಲಾಹ್ ಇರಲಿ, ಈಶ್ವರನಿರಲಿ, ಜೀಸಸ್ ಇರಲಿ ದೇವರೆಂಬುವನು ಎಲ್ಲರಿಗೂ ಒಬ್ಬನೇ. ನಾಮ ಹಲವು. ಮತ್ತು ನಾವೆಲ್ಲರೂ ಅವನ ಮಕ್ಕಳು. ಯಾವತ್ತಿಗೂ ನನ್ನ ಬದ್ಧತೆ ನನ್ನ ದೇಶ, ನನ್ನ ಸರ್ಕಾರ ಮತ್ತು ಈ ದೇಶದ ಸಂವಿಧಾನಕ್ಕೆ. ಕೆಲವು ಜನರ ಅಜ್ಞಾನ ಮತ್ತು ಮೂರ್ಖತನ ನಿಜಕ್ಕೂ ನನಗೆ ನೋವುಂಟುಮಾಡಿದೆ. ಇದರ ಕುರಿತು ಕಾನೂನು ಪ್ರಕಾರ ತನಿಖೆ ನಡೆಸಿ ಇಂತಹ ವಿಷವನ್ನು ಹರಡುತ್ತಿರುವವರ ಮೇಲೆ ಕ್ರಮ ಜರುಗಿಸಲಿ ಎಂದು ಆಶಿಸುತ್ತೇನೆ ಎಂದರು.










