ಪಾಟ್ನಾ : ಬಿಹಾರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಮುರಿದು ಬಿದ್ದಿದೆ. ಇಂದು ಸಂಜೆ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿರುವ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ಸಿಎಂ ನಿತೀಶ್ ಕುಮಾರ್ ಇಂದು ಶಾಸಕರು, ಸಂಸದರೊಂದಿಗೆ ಮಹತ್ವದ ಸಭೆ ನಡೆಸಿದರು. ಬಹುತೇಕ ಸದಸ್ಯರು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ನಿತೀಶ್ ಕುಮಾರ್ ಅವರ ಈ ನಿರ್ಧಾರ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಅವರ ಮುಂದಿನ ನಡೆಗಳು ಕುತೂಹಲ ಮೂಡಿಸಿದೆ.
ಬಿಜೆಪಿಗೆ ಕೈಕೊಟ್ಟು ನಿತೀಶ್ ಕುಮಾರ್ ಸರ್ಕಾರ ಉರುಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ಬಳಿಕ ಆರ್ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ಜೆಡಿಯು-ಆರ್ಜೆಡಿ-ಕಾಂಗ್ರೆಸ್ ‘ಮಹಾಘಟಬಂಧನ್’ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿಯ ತೇಜಸ್ವಿ ಯಾದವ್ ಅವರ ಉಪಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.
ಆದರೆ, ನಿತೀಶ್ ಕುಮಾರ್ ಅವರು 2017ರಲ್ಲಿ ಮಹಾಘಟಬಂಧನ್ ಸರ್ಕಾರವನ್ನು ಉರುಳಿಸಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆ ಮೈತ್ರಿ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಮೊದಲು ಬಿಹಾರದಲ್ಲಿ ಬಿಜೆಪಿಯೊಂದಿಗೆ ಆಡಳಿತ ನಡೆಸುತ್ತಿದ್ದಾಗ ಅವರು ಎನ್ಡಿಎ ತೊರೆದು ಆರ್ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡರು. ನಂತರ ಅವರು ಆರ್ ಜೆಡಿ ತೊರೆದು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಮರಳಿದ್ದರು.










