ಬೆಂಗಳೂರು: ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಅಪಾರ್ಟ್ಮೆಂಟ್ನ ಕೊಠಡಿಯೊಂದರಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ಗೆ ನಾಲ್ಕುವರೆ ವರ್ಷದ ಗಂಡು ಮಗು ಬಲಿಯಾಗಿದೆ.
ಅನೂಪ್ ಸಾವನ್ನಪ್ಪಿದ ಮಗು. ಸುಲ್ತಾನ್ ಪಾಳ್ಯ ಬಳಿಯಿರುವ ರಿಯಾನ್ ವುಡ್ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ನೇಪಾಳ ಮೂಲದ ಪೂರಾನ್ ಖಂಡಕ್ ಹಾಗೂ ಇವರ ಪತ್ನಿ ಲಕ್ಷ್ಮೀ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಘಟನೆ ನಡೆದ ಅಪಾರ್ಟ್ಮೆಂಟ್ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಸಹ ಅಪಾರ್ಟ್ಮೆಂಟ್ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು.
ದಂಪತಿಗೆ ವಾಸ್ತವ್ಯಕ್ಕಾಗಿ ನೆಲಮಹಡಿಯಲ್ಲಿ ಮನೆ ನೀಡಲಾಗಿತ್ತು. ಅಲ್ಲದೇ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯ ಮನೆ ಸಹ ನೀಡಲಾಗಿತ್ತು. ಗಂಡ – ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ – ಪಾಲನೆ ಕಷ್ಟವಾಗಿತ್ತು. ನಿತ್ಯ ಮಧ್ಯಾಹ್ನ ಮಗುವನ್ನ ಮಲಗಿಸಿ ಡೋರ್ ಲಾಕ್ ಹಾಕಿ ದಂಪತಿ ತಮ್ಮ ಹೊರಗಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ನಿನ್ನೆಯೂ ಸಹ ಮಗುವನ್ನು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್ ಮಾಡಿಕೊಂಡು ಬಂದಿದ್ದರು. ಈ ವೇಳೆ ಎಲೆಕ್ಟ್ರಿಕಲ್ ಶಾರ್ಟ್ ಸಕ್ಯೂರ್ಟ್ ನಿಂದ ಬೆಂಕಿ ಹೊತ್ತಿಕೊಂಡು ಮಗು ಸುಟ್ಟು ಕರಕಲಾಗಿತ್ತು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಬೆಳಕಿಗೆ ಬಂದಿದೆ. ಕೂಡಲೇ ಅಗ್ನಿಶಾಮಕದಳಕ್ಕ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಮಗು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.










