ಹೆಬ್ಬಾಳ್ಕರ್ ಬಗ್ಗೆ ಕೀಳು ಹೇಳಿಕೆ: ಸಂಜಯ್ ಪಾಟೀಲ್ ವಿರುದ್ಧ ದೂರು ದಾಖಲು…

36
firstsuddi

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕೀಳು ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ.

ಈ ಕುರಿತಾಗಿ ಸಂಜಯ್ ಪಾಟೀಲ್‌ಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತೆಯರು ಬೆಳಗಾವಿಯ ಆದರ್ಶ ನಗರದಲ್ಲಿರುವ ಸಂಜಯ್ ಪಾಟೀಲ್ ಮನೆ ಎದುರು ಪ್ರತಿಭಟನೆ ಮಾಡಿದ್ದರು.

ಸುಖ ನಿದ್ರೆಗೆ ಅಕ್ಕ ಇವತ್ತು ಒಂದು ಪೆಗ್ ಜಾಸ್ತಿ ಹಾಕಬೇಕು ಎಂದು ಸಂಜಯ್ ಪಾಟೀಲ್ ಹೇಳಿದ್ದರು. ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದ ಮಹಿಳೆಯರನ್ನ ನಾನು ಪ್ರತಿನಿಧಿಸುತ್ತೇನೆ. ನಾಲಿಗೆ ಮೇಲೆ ಹಿಡಿತ ಇರಬೇಕು. ವೇದಿಕೆ ಮೇಲೆ ಇದ್ದವರು ಯಾಕೆ ತಡೆಯಲಿಲ್ಲ. ಸಂಜಯ್ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ? ನನಗೆ ಅಲ್ಲ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ. ನಾನು ಲಿಂಗಾಯತ ಸಮಾಜದ ಹೆಣ್ಣು ಮಗಳು. ಲಿಂಗಾಯತ ಸಮಾಜಕ್ಕೆ ಮಾಡಿದ ಅಪಮಾನ. ಇಡೀ ರಾಜ್ಯದ ಮಹಿಳೆಯರಿಗೆ ಧಿಕ್ಕರಿಸಲು ಕರೆ ಕೊಡುತ್ತೇನೆ. ಮಹಿಳೆಯ ಆತ್ಮಗೌರವಕ್ಕೆ ಧಕ್ಕೆ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಸಂಜಯ್ ಪಾಟೀಲ್ ಹೇಳಿದ್ದೇನು?: ಲೋಕಸಭಾ ಚುನಾವಣೆ ಪ್ರಚಾರ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕೀಳು ಹೇಳಿಕೆಯೊಂದನ್ನು ನೀಡಿ, ಬಿಜೆಪಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿರುವುದನ್ನು ನೋಡಿ ಹೆಬ್ಬಾಳ್ಕರ್ ಗೆ ರಾತ್ರಿ ನಿದ್ದೆ ಬರಲ್ಲ. ನಿದ್ದೆ ಮಾತ್ರೆ ತೆಗೆದುಕೊಂಡು ಮಲಬೇಕಾಗುತ್ತದೆ. ಅವರು ಒಂದು ಎಕ್ಸ್‌ಟ್ರಾ ಪೆಗ್ ಹೊಡೆಯಬೇಕಾಗುತ್ತದೆ ಎಂದು ಕೀಳು ಹೇಳಿಕೆ ನೀಡಿದ್ದಾರೆ. ಪಾಟೀಲರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.