ಬೆಂಗಳೂರು: ನಕಲಿ ದಾಖಲೆಗಳನ್ನು ನೀಡಿ ಟಿಡಿಎಸ್ ಮೊತ್ತವನ್ನು ವಾಪಸ್ ಪಡೆದು ಅಕ್ರಮ ಹಣಕಾಸು ವಹಿವಾಟು ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ದಿಲೀಪ್ ಎಂಬಾತನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಆತನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ. ಬ್ಯಾಂಕ್ ಸಾಲದ ವಂಚನೆ, ಗುರುತಿನ ಕಳ್ಳತನ ಮತ್ತು ದುರುಪಯೋಗ ಮತ್ತು ಆದಾಯ ತೆರಿಗೆ ಮರುಪಾವತಿ ಹಗರಣಗಳಂತಹ ಅನೇಕ ಅಪರಾಧಗಳಲ್ಲಿ ಆರೋಪಿ ತೊಡಗಿದ್ದ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ. ದಿಲೀಪ್ ಅನೇಕ ಪ್ಯಾನ್ ಕಾರ್ಡ್ ಪಡೆದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ದಿಲೀಪ್ ಹತ್ತಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್‍ಗಳಲ್ಲಿ ಸಾಲ ಪಡೆದು ವಂಚನೆ, ಗುರುತಿನ ಚೀಟಿ ದುರುಪಯೋಗ ಪಡಿಸಿಕೊಂಡು ಟಿಡಿಎಸ್ ಹಣ ವಾಪಸ್ ಪಡೆಯುತ್ತಿದ್ದ. ಅದಕ್ಕಾಗಿ ತನ್ನ ಹೆಸರನ್ನು ಬಿ.ಆರ್.ದಿಲೀಪ್ ಅಲಿಯಾಸ್ ದಿಲೀಪ್ ರಾಜೇಗೌಡ ಅಲಿಯಾಸ್ ದಿಲೀಪ್ ಬಾಲಗಂಚಿ ರಾಜೇಗೌಡ ಎಂಬ ಹೆಸರಿನಲ್ಲಿ ನಕಲಿ ಪಾನ್ ಮತ್ತು ಆಧಾರ್ ಕಾರ್ಡ್‍ಗಳನ್ನು ಪಡೆದುಕೊಂಡಿದ್ದಾನೆ. ಈ ಮೂರು ಪಾನ್ ಕಾರ್ಡ್‍ಗಳನ್ನು ಪಡೆದುಕೊಂಡು ಹಲವಾರು ಹಣಕಾಸಿನ ವ್ಯವಹಾರ ಮಾಡಿದ್ದಾನೆ. ಪ್ರಮುಖವಾಗಿ ವಾಹನ ಸಾಲ ಪಡೆಯುವುದು. ಕೆಲವರ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡು ಕೆಲ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ತೆರೆದಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.










