ಬೆಂಗಳೂರು : ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬನಶಂಕರಿ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ ನಡೆದಿದೆ.
ಅಫ್ರೀನ್ ಖಾನಂ(28) ಕೊಲೆಯಾದ ಮಹಿಳೆ. ನಿನ್ನೆ ಸಂಜೆ ಅಫ್ರೀನ್ ಖಾನಂನನ್ನು ಹತ್ಯೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ರಾತ್ರಿ ಮನೆಗೆ ಬಂದ ಪತಿ ಬೀಗ ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಫ್ರೀನ್ ಖಾನಂಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಪತಿ ಟಿಂಬರ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ.
ಚಾಕು ಹಾಗೂ ಕತ್ತರಿಯಿಂದ ಮಹಿಳೆಯ ಎದೆ ಕೈ-ಕಾಲುಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಳಿಕ ಯಾರಿಗೂ ಅನುಮಾನ ಬಾರದಂತೆ ಹಾಸಿಗೆಗೆ ಬೆಂಕಿಯಿಡಲಾಗಿದೆ. ಪರಿಣಾಮ ಮನೆಯ ತುಂಬೆಲ್ಲಾ ಹೊಗೆ ದಟ್ಟವಾಗಿ ಆವರಿಸಿಕೊಂಡಿತ್ತು. ಇಂದು ಬೆಳಗ್ಗೆ ಬೀಗ ಹಾಕಿದ್ದ ಮನೆಯಲ್ಲಿ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಕೂಡಲೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಅಫ್ರೀಂ ಖಾನ್ ಪತಿ ಲಾಲುನನ್ನು ವಶಕ್ಕೆ ಪಡೆದಿದ್ದಾರೆ.










