ಬೆಲೆ ಏರಿಕೆ ಖಂಡಿಸಿ ಕೈ ನಾಯಕರಿಂದ ಟಾಂಗಾ ಜಾಥಾ…

68
firstsuddi

ಬೆಂಗಳೂರು : ಎತ್ತಿನ ಬಂಡಿ ಆಯ್ತು, ಸೈಕಲ್ ಸವಾರಿ ಆಯ್ತು ಇದೀಗ ಕೈ ನಾಯಕರಿಂದ ಟಾಂಗಾ ಜಾಥಾ. ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ಟಾಂಗಾ ಜಾಥಾ ನಡೆಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಗಾಡಿಯಲ್ಲಿ ಹೋಗುವ ಮೂಲಕ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು ಜಾಥಾದಲ್ಲಿ ಭಾಗಿಯಾಗಿದ್ದರು.

ಜಾಥಾಗೆ ಚಾಲನೆ ನೀಡಿದ ಸಂದರ್ಭ ಕೆಪಿಸಿಸಿ ಕಚೇರಿ ಮುಂಭಾಗ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುವ ವರೆಗೂ, ಇಂಧನ ಬೆಲೆ ಇಳಿಕೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಅಧಿವೇಶನದ ಆರಂಭದ ದಿನ ಎತ್ತಿನಗಾಡಿ ಚಲೋ ನಡೆಸಿದ್ದ ಕಾಂಗ್ರೆಸ್ ನಾಯಕರು ಇದೀಗ ವಿಧಾನಮಂಡಲ ಮಳೆಗಾಲದ ಅಧಿವೇಶನದ ಕಡೆಯ ದಿನವಾದ ಇಂದು ಮತ್ತೊಮ್ಮೆ ಕೆಪಿಸಿಸಿ ಕಚೇರಿಯಿಂದ ಟಾಂಗಾ ಜಾಥಾ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.