ಚಿಕ್ಕಮಗಳೂರು : ನಗರದ ಆಜಾದ್ ಪಾರ್ಕ್ ವೃತ್ತದಿಂದ ಹಿರೇಮಗಳೂರು ವರೆಗಿನ ಬೇಲೂರು ರಸ್ತೆಗೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡುವಂತೆ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಶಾಸಕರು, ಜಿಲ್ಲಾಡಳಿತ ಮತ್ತು ನಗರಸಭೆಯನ್ನು ಒತ್ತಾಯಿಸಿದೆ.
ಶಾಸಕ ಸಿ.ಟಿ.ರವಿ, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಮತ್ತು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ನಿನ್ನೆ ಭೇಟಿ ಮಾಡಿದ ಇಂಜಿನಿಯರ್‍ಗಳು ಹಾಗೂ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ವಿಶ್ವವಿಖ್ಯಾತರಾಗಿದ್ದಾರೆ, ಅವರು ಜಗತ್ತಿಗೆ, ದೇಶಕ್ಕೆ ಮತ್ತು ನಾಡಿಗೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯವಾಗಿದೆ, ಅವರ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ದೇಶಕ್ಕೆ ಮತ್ತು ನಾಡಿಗೆ ಮಹತ್ತರವಾದ ಕೊಡುಗೆ ನೀಡಿರುವ ವಿಶ್ವೇಶ್ವರಯ್ಯನವರ ಹೆಸರನ್ನು ಚಿರಸ್ಥಾಯಿಯಾಗಿಸುವುದರ ಜೊತೆಗೆ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ನೆನಪಿಸುವ ನಿಟ್ಟಿನಲ್ಲಿ ಬೇಲೂರು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಸಿ.ಪಿ.ಸುರೇಶ್, ಉಪಾಧ್ಯಕ್ಷ ಜಿ.ರಮೇಶ್, ಕಾರ್ಯದರ್ಶಿ ಲಿಂಗರಾಜು, ಖಜಾಂಚಿ ನಾಗೇಂದ್ರ ಪ್ರಸಾದ್, ಸಹಸಂಯೋಜಕ ಕೆ.ಎಸ್.ಸತೀಶ್, ಮಾಜಿ ಅಧ್ಯಕ್ಷ ಬಿ.ಎಸ್.ಹರೀಶ್, ನಿರ್ದೇಶಕರಾದ ಕೆ.ಪಿ.ನಾಗೇಂದ್ರ, ವೆಂಕಟೇಶ್, ಕಬೀರ್ ಹಾಜರಿದ್ದರು.









