ಬೆಂಗಳೂರು : ಬೈಕ್, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವವವರ ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡುವುದಿಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟನೆ ನೀಡಿದೆ.
ಬೈಕ್, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವರೆಂಬ ಕಾರಣಕ್ಕೆ ರಾಜ್ಯದಲ್ಲಿ ಅಂತ್ಯೋದಯ, ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬ ಸುದ್ದಿ ಆಧಾರರಹಿತವಾಗಿದ್ದು, ಇಂಥ ಯಾವುದೇ ನಿರ್ದೇಶನ ಅಥವಾ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಜಿಲ್ಲೆಗಳಿಗೆ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೂರು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು ವಾರ್ಷಿಕ ಆದಾಯ ರೂ.1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿ ಆದ್ಯತೇತರ ವರ್ಗಕ್ಕೆ (ಎಪಿಎಲ್) ಪರಿವರ್ತಿಸುವ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.
ಇನ್ನೂ ಯಾವುದೇ ಅರ್ಹ ಕುಟುಂಬಗಳ ಪಡಿತರ ಚೀಟಿಗಳನ್ನು ಯಾವುದೇ ಅಧಿಕಾರಿ ಆಧಾರ ರಹಿತವಾಗಿ ರದ್ದುಪಡಿಸಿದರೆ ಅಥವಾ ಆದ್ಯತೇತರ ವರ್ಗಕ್ಕೆ ಪರಿವರ್ತಿಸಿದರೆ, ಅಂತಹ ಕುಟುಂಗಳು ತಾಲ್ಲೂಕಿನ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು ಅಥವಾ ಆಹಾರ ಇಲಾಖೆ ಜಂಟಿ/ಉಪ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.










