ಹಾವೇರಿ : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿದ್ದು, ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮಕ್ಕೆ ಆಗಮಿಸಿದ ಬೊಮ್ಮಾಯಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮಧ್ಯ ಕರ್ನಾಟಕದ ಬರಗಾಲ ಪೀಡಿತ, ಬಿಸಿಲು ಪ್ರದೇಶದ ನಾಡಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ, ಕುಡಿಯುವ ನೀರಿನ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಬಹಳ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ರಸ್ತಾವನೆ ಕಳಿಸಿದ್ದೆವು. ಕರ್ನಾಟಕದ ಹಲವಾರು ಯೋಜನೆಗಳಲ್ಲಿ ಇದು ಮೊದಲು ರಾಷ್ಟ್ರೀಯ ಯೋಜನೆಯಾಗಿದೆ. ಈ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಅನುದಾನ ಘೋಷಣೆ ಮಾಡಿದ್ದು, ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಬ್ಯಾಡಗಿ ಇಂಡಸ್ಟ್ರಿಯಲ್ ಕಾರಿಡಾರ್ ಭೂಸ್ವಾಧೀನಕ್ಕೆ ರೈತರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಫಲವತ್ತಾದ ಭೂಮಿ ಇರುವ ಕಾರಣ ರೈತರು ವಿರೋಧ ಮಾಡಿದ್ದಾರೆ. ಎಲ್ಲಿ ಫಲವತ್ತಾದ ಭೂಮಿ ಇರುತ್ತದೆ. ಅದನ್ನು ತೆಗೆದುಕೊಳ್ಳದೆ ಬಂಜರು ಭೂಮಿ ತಗೊಂಡು ಕೈಗಾರಿಕಾ ಕಾರಿಡಾರ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ. ಅದಕ್ಕಾಗಿಯೇ ಬ್ಯಾಡಗಿ ಇಂಡಸ್ಟ್ರಿಯಲ್ ಕಾರಿಡಾರ್ ಗೆ ಭೂಸ್ವಾಧೀನ ಪ್ರಕ್ರಿಯೆ ಆದೇಶ ಹಿಂಪಡೆದಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ಬೇರೆ ಕಡೆ ಎಲ್ಲಿ ಕಾರಿಡಾರ್ ಮಾಡಬೇಕು ಎಂಬುದರ ಬಗ್ಗೆ ಜಮೀನು ಹುಡುಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.










