ನವದೆಹಲಿ : ಭಾರತೀಯ ಸೇನೆಯಲ್ಲಿ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರು ಮಾಹಿತಿ ನೀಡಿದ್ದಾರೆ. ಕುಪ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಡುತ್ತಿದೆ. ನಾವು ನಮ್ಮ ನಾಗರಿಕರಿಗೆ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗಗಳಿಗೆ ವೈದ್ಯಕೀಯ ತಂಡ ಹಾಗೂ ಔಷಧಿಗಳು ರಫ್ತು ಮಾಡಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಮಾತ್ರ ರಫ್ತು ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಷ್ಟೆ ಅಲ್ಲದೇ ಇಲ್ಲಿಯವರೆಗೆ ಭಾರತೀಯ ಸೇನೆಯ 8 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಅವರಲ್ಲಿ ಇಬ್ಬರು ವೈದ್ಯರು ಮತ್ತು ಒಬ್ಬರು ನರ್ಸಿಂಗ್ ಸಹಾಯಕ, ಇನ್ನುಳಿದ 4 ಮಂದಿ ಚಿಕಿತ್ಸೆ ಉತ್ತಮವಾಗಿ ಸ್ಪಂಧಿಸುತ್ತಿದ್ದಾರೆ. ಲಡಾಖ್‍ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು. ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಹಾಗೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.










