ಕಾಂತಾರ ಸಿನಿಮಾದಲ್ಲಿ ಭೂತಕೋಲ ಆಚರಣೆ ಇದೆ. ಇದು ನಮ್ಮ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದರು. ಈ ಹೇಳಿಕೆಯನ್ನು ನಟ ಚೇತನ್ ಅಹಿಂಸಾ ಅಲ್ಲಗಳೆದಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಹೇಳಿದ್ದರು. ಈ ಕುರಿತು ಪರ ವಿರೋಧ ಚರ್ಚೆ ಕೂಡ ನಡೆದಿತ್ತು. ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಬುಡಕಟ್ಟು ನಮ್ಮ ಮೂಲ ಸಂಸ್ಕೃತಿ. ಇದಕ್ಕೆ 70 ಸಾವಿರ ವರ್ಷಕ್ಕೂ ಅಧಿಕ ಇತಿಹಾಸವಿದೆ. ಹಿಂದೂ ಧರ್ಮಕ್ಕೆ ಕೇವಲ ಮೂರುವರೆ ಸಾವಿರ ವರ್ಷ ಇತಿಹಾಸ. ಹಿಂದಿ ಹೇರಿಕೆ ಹೇಗೆ ಒಪ್ಪಕ್ಕಾಗಲ್ವೋ ಹಾಗೆಯೇ ಹಿಂದುತ್ವ ಒಪ್ಪಲಾಗಲ್ಲ. ಧರ್ಮ, ಜಾತಿಗಳಲ್ಲಿ ವಿವಿಧತೆ ಇದೆ. ಹಿಂದೂ ಬೇರೆ ಹಿಂದುತ್ವ ಬೇರೆ. ಭೂತಕೋಲ ಮೂಲ ನಿವಾಸಿಗಳ ಆಚರಣೆ. ಕೇವಲ ಹಿಂದೂ ಧರ್ಮದ್ದಲ್ಲ. ಎಲ್ಲ ಆಚರಣೆಗಳನ್ನು ಗೌರವಿಸಿ, ಪಾಲಿಸಿ. ಆದರೆ ಎಲ್ಲವನ್ನೂ ಹಿಂದೂಗಳ ಸ್ವಂತ ಎನ್ನೋಕ್ಕಾಗಲ್ಲ ಎಂದು ನಟ ಚೇತನ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಕನ್ನಡದ ಚಲನಚಿತ್ರ `ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ನಟ ಚೇತನ್ ಪೋಸ್ಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.










