ಭೋಪಾಲ್ ಅನಿಲ ದುರಂತ – ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೋರಿ ಕೇಂದ್ರ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ.

39
firstsuddi

ನವದೆಹಲಿ : ಭೋಪಾಲ್ ಅನಿಲ ದುರಂತ ಪ್ರಕರಣದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಭೋಪಾಲ್ ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ 1984ರಲ್ಲಿ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿತ್ತು. ಈ ಅನಿಲ ದುರಂತದಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಪ್ರಕರಣವನ್ನು ಮತ್ತೆ ತೆರೆಯಬೇಕು. ಅನಿಲ ಸೋರಿಕೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 7,844 ಕೋಟಿ ರೂ.ವನ್ನು ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ ನ ಉತ್ತರಾಧಿಕಾರಿ ಸಂಸ್ಥೆಗಳು ನೀಡಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್ ನ ಮೊರೆ ಹೋಗಿತ್ತು. ಅಷ್ಟೇ ಅಲ್ಲದೇ ಅನಿಲ ದುರಂತದಿಂದ ಜೀವ ಹಾನಿ ಮತ್ತು ಪರಿಸರಕ್ಕೆ ಅಗಾಧ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ವಾದಿಸಿತ್ತು.

ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್‍ನಾಥ್ ಮತ್ತು ಜೆ.ಕೆ ಮಹೇಶ್ವರಿ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ವಂಚನೆ ನಡೆದರೆ ಮಾತ್ರ ಪರಿಹಾರವನ್ನು ನೀಡುವುದರ ಬಗ್ಗೆ ಯೋಚಿಸಬಹುದು. ಆದರೆ ಕೇಂದ್ರವು ಈ ವಿಷಯದಲ್ಲಿ ವಾದಿಸಿಲ್ಲ. 2 ದಶಕಗಳ ನಂತರವೂ ಈ ವಿಷಯವನ್ನು ಪ್ರಸ್ತಾಪಿಸಲು ಕೇಂದ್ರವು ಯಾವುದೇ ತರ್ಕವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂತ್ರಸ್ತರಿಗೆ ಪ್ರಮಾಣಾನುಗುಣವಾಗಿ ಇದಾಗಲೇ 6 ಬಾರಿ ಪರಿಹಾರವನ್ನು ವಿತರಿಸಲಾಗಿದೆ. ಭೋಪಾಲ್ ಅನಿಲ ದುರಂತ ಸಂತ್ರಸ್ತರ ಅಗತ್ಯವನ್ನು ಪೂರೈಸಲು ಆರ್ ಬಿಐ ಬಳಿ ಇದಾಗಲೇ 50 ಕೋಟಿ ರೂ.ವನ್ನು ಇರಿಸಲಾಗಿದೆ. ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್ ಗಳನ್ನು ಪೂರೈಸಲು ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದೆ.