ಮಗನಿಗಾಗಿ ಮಿಡಿದ ತಾಯಿ ಹೃದಯ-ಬರೋಬ್ಬರಿ 1400 ಕಿ.ಮೀ ಕ್ರಮಿಸಿ ಮಗನನ್ನು ಕರೆತಂದ ತಾಯಿ…

510
firstsuddi

ಆಂಧ್ರಪ್ರದೇಶ : ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸವನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣದೊಂದು ಸುಳಿವು ನೀಡದೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದರು. ಇದರಿಂದ ಕೆಲವು ಜನರು ತಮ್ಮ ಊರುಗಳಿಗೆ ತೆರಳಲು ಆಗದೇ ತಾವು ಇದ್ದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅಲ್ಲದೇ ಯಾವುದೇ ವಾಹನಗಳೂ ಕೂಡಾ ಅನಾವಶ್ಯಕವಾಗಿ ರಸ್ತೆಗೆ ಇಳಿಯಬಾರದು ಎಂದು ಸೂಚಿಸಲಾಗಿದೆ. ಈ ನಡುವೆ ಆಂಧ್ರಪ್ರದೇಶದಲ್ಲಿ ತಾಯಿಯೊಬ್ಬಳು ಲಾಕ್‍ಡೌನ್‍ನಿಂದ ತನ್ನ ಸ್ನೇಹಿತನ ಮನೆಯಲ್ಲಿ ಸಿಲುಕಿಕೊಂಡಿದ್ದ ಮಗನನ್ನು ಕರೆತರಲು ಬರೋಬ್ಬರಿ 1400 ಕಿ.ಮೀ ಸ್ಕೂಟಿಯಲ್ಲಿ ಪ್ರಯಾಣ ಮಾಡಿದ್ದಾರೆ. ಸರ್ಕಾರಿ ಶಿಕ್ಷಕಿಯಾಗಿರುವ 50 ವರ್ಷದ ರಜಿಯಾ ಬೇಗಂ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಸಿಲುಕಿಕೊಂಡಿದ್ದ 17 ವರ್ಷದ ಮಗನನ್ನು ಕರೆತರಲು ತನ್ನ ಸ್ಕೂಟಿಯಲ್ಲಿ 1400 ಕಿ.ಮೀ ಕ್ರಮಿಸಿದ್ದಾರೆ. ತೆಲಂಗಾಣದ ನಿಜಾಮಾಬಾದ್‍ನಿಂದ ನೆಲ್ಲೂರಿಗೆ 700 ಕಿ.ಮೀ ಇದ್ದು, ಹೋಗಿ ಬರುವುದಕ್ಕೆ 1400 ಕಿ.ಮೀ ಆಗುತ್ತದೆ. ರಜಿಯಾ ಬೇಗಂ ಅವರು ಸೋಮವಾರ ನಿಜಾಮಾಬಾದ್‍ನಿಂದ ಪ್ರಯಾಣ ಬೆಳೆಸಿ ಮಂಗಳವಾರ ಬೆಳಿಗ್ಗೆ ನೆಲ್ಲೂರು ತಲುಪಿದ್ದರು. ಬಳಿಕ ಮಗನನ್ನು ಕರೆದುಕೊಂಡು ಸಮಯ ವ್ಯರ್ಥ ಮಾಡದೆ ಬುಧವಾರ ಸಂಜೆ ನಿಜಾಮಾಬಾದ್‍ಗೆ ವಾಪಸ್ಸಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಜಿಯಾ ಬೇಗಂ ಅವರು, ದೇಶದಲ್ಲಿ ಲಾಕ್‍ಡೌನ್ ಆದೇಶ ಜಾರಿಯಾದಲ್ಲಿಂದ ನನ್ನ ಮಗ ತನ್ನ ಸ್ನೇಹಿತನ ಮನೆಲ್ಲೇ ಸಿಲುಕಿಕೊಂಡಿದ್ದ. ಹೀಗಾಗಿ ಆತನನ್ನು ಕರೆತರಲು ನಾನು ಪೊಲೀಸರ ಬಳಿ ಅನುಮತಿ ಪಡೆದುಕೊಂಡಿದ್ದರಿಂದ ಮಗನನ್ನು ವಾಪಾಸ್ ಕರೆತರಲು ಸಾಧ್ಯವಾಯಿತು. ಹೋಗಿ ಬರುವ ವೇಳೆ ಹಲವು ಕಡೆ ಪೊಲೀಸರು ತಡೆದರು ಆದರೆ ನಾನು ಪೊಲೀಸರ ಬಳಿ ಪಾಸ್ ಪಡೆದುಕೊಂಡಿದ್ದರಿಂದ ನನ್ನನ್ನು ಕಳುಹಿಸಿದ್ದರು. ನನಗೆ ಮಗನನ್ನು ಯಾವಾಗ ನೋಡುತ್ತೇನೋ ಎಂಬ ಆತುರ ಹೆಚ್ಚಾಗಿತ್ತು. ಮಗನನ್ನು ನೋಡುತ್ತಿದ್ದಂತೆ ಸಮಯ ವ್ಯರ್ಥ ಮಾಡದೇ ಕೂಡಲೇ ಅಲ್ಲಿಂದ ಮರಳಿದ್ದೇನೆ ಎಂದು ತಿಳಿಸಿದ್ದಾರೆ.