ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

75
firstsuddi

ಬೆಂಗಳೂರು: ನೀರಿನ ಟಬ್ ನಲ್ಲಿ ಮೂರುವರೆ ವರ್ಷದ ಹೆಣ್ಣು ಮಗುವನ್ನು ಮುಳುಗಿಸಿ ಹತ್ಯೆ ಮಾಡಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಹೆಚ್ ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಿತ್ರಿ ದೇವಿ ಮಗುವನ್ನು ಕೊಲೆಗೈದ ತಾಯಿ. ಸಂಯುಕ್ತಾ ಸಾವನ್ನಪ್ಪಿದ ಮಗು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿಯನ್ನು ಪತಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಗಾಯತ್ರಿ ದೇವಿ ಬದುಕುಳಿದಿದ್ದಾರೆ.

ತಮಿಳುನಾಡು ಮೂಲದ ನರೇಂದ್ರನ್ ಹಾಗೂ ಗಾಯಿತ್ರಿ ದೇವಿ ದಂಪತಿ ಬೆಂಗಳೂರಿನ ಹೆಚ್ಎಎಲ್ ನ ವಿಭೂತಿಪುರದಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹ ಹಿನ್ನಲೆ ಇಪ್ಪತ್ತು ದಿನಗಳ ಹಿಂದೆ ನರೇಂದ್ರನ್ ತಾಯಿ ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಊರಿಗೆ ಹೋಗಿದ್ದ ಅವರು ನಿನ್ನೆ ಮುಂಜಾನೆ ವಾಪಸ್ ಆಗಿದ್ದರು. ಮನೆ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಬಲವಾಗಿ ಬಾಗಿಲು ತಳ್ಳಿದ್ದಾರೆ. ಒಳಪ್ರವೇಶಿಸಿದಾಗ ಮಗುವನ್ನು ನೀರಿನ ಬಕೆಟ್ ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದು ಗೊತ್ತಾಗಿದೆ.

ಗಾಯಿತ್ರಿದೇವಿ ಫ್ಯಾನಿಗೆ ನೇಣು ಬಿಗಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದನ್ನು ನೋಡಿದ ನರೇಂದ್ರನ್ ಆತಂಕದಿಂದಲೇ ಪತ್ನಿಯನ್ನು ಕೆಳಗಿಳಿಸಿದಾಗ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಗಾಯಿತ್ರಿದೇವಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತ್ಮಹತ್ಯೆ ಯತ್ನಕ್ಕೂ ಮುನ್ನ ಗಾಯಿತ್ರಿ ಬರೆದಿಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ. ಬಂದಿರುವ ಕಷ್ಟಗಳನ್ನು ನಿಭಾಯಿಸುವ ಶಕ್ತಿ ಇಲ್ಲ. ತನ್ನ ಸಾವಿನ ನಂತರ ಮಗು ನೋಡಿಕೊಳ್ಳಲು ಯಾರು ಇರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ನರೇಂದ್ರನ್ ಅವರು ನೀಡಿದ ದೂರಿನನ್ವಯ ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.